ನ್ಯೂಸ್

ರಸಗೊಬ್ಬರ ಕೊರತೆಯಿಲ್ಲ: ಸಚಿವ ಚಲುವರಾಯಸ್ವಾಮಿ | Farmers need not worry

ಬೆಂಗಳೂರು: ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ. ಕಡಿಮೆ ರಸಗೊಬ್ಬರ ಬಳಸುವುದರಿಂದ ಇಳುವರಿ ಕಡಿಮೆಯಾಗುವುದಿಲ್ಲ. ಉಳಿದ ದಾಸ್ತಾನು ಪಡೆದು ಹೆಚ್ಚು ಬೇಡಿಕೆಯಿರುವೆಡೆ ಪೂರೈಸಿ ಸರಿದೂಗಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮಜಾಯಿಷಿ ನೀಡಿದರು.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈ ವರ್ಷ ಮುಂಗಾರು ಬೇಗ ಆರಂಭವಾಗಿದ್ದರೆ, ಎರಡು ಲಕ್ಷ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ವಿಸ್ತರಣೆಯಾಗಿದೆ. ಹೀಗಾಗಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರು.

ಕೆಲವು ಜಿಲ್ಲೆಗಳಲ್ಲಿ ರೈತರು ಆತಂಕಗೊಂಡು ಆಗಸ್ಟ್, ಸೆಪ್ಟೆಂಬರ್ ತಿಂಗಳಿಗೆ ಬೇಕಾದ ರಸಗೊಬ್ಬರ ಈಗಲೇ ಖರೀದಿಸಲು ಮುಂದಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಉಂಟಾಗಿರುವ ಸಮಸ್ಯೆ ಸರಿದೂಗಿಸಲು ಬೇರೆ ಜಿಲ್ಲೆಗಳಲ್ಲಿ ಹೆಚ್ಚುವರಿ ಉಳಿಕೆಯಿರುವ ರಸಗೊಬ್ಬರವನ್ನು ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಗುರಿಗಿಂತ ಹೆಚ್ಚಿನ ದಾಸ್ತಾನು

ರಾಜ್ಯದಲ್ಲಿ ನಮ್ಮ ಗುರಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ, ಜುಲೈ ಮಾಹೆಯ ಬೇಡಿಕೆಯಂತೆ ಆಧಾರದಲ್ಲಿನ ವಿತರಣೆಯ ನಂತರವೂ ದಾಸ್ತಾನು ಉಳಿದಿದೆ. ಕೊರತೆಯಾಗದಂತೆ ದಾಸ್ತಾನು ಹೆಚ್ಚಿರುವ ಜಿಲ್ಲೆಗಳಿಂದ ಮರು ವಿಂಗಡಣೆ ಮಾಡುತ್ತಿದ್ದು, ರೈತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಕೋರಿದರು.

ಜುಲೈವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5,34,009 ಟನ್ ರಸಗೊಬ್ಬರ (ಎಲ್ಲ ವಿಧದ ರಸಗೊಬ್ಬರ ಸೇರಿ) ಹಂಚಿಕೆಯಾಗಿದೆ. ಇದರಲ್ಲಿ ಈವರೆಗೆ 4,30,633 ಟನ್ ಪೂರೈಕೆಯಾಗಿದೆ.

ಏಪ್ರಿಲ್ ನಿಂದ ಜುಲೈವರೆಗೆ ರಾಜ್ಯದಲ್ಲಿ 6,80,655 ಟನ್ ಯೂರಿಯಾ ಬೇಡಿಕೆ ಇದ್ದು, ಕೇಂದ್ರ ಸರ್ಕಾರದಿಂದ 6,82,500 ಮೆ. ಟನ್ ಹಂಚಿಕೆಯಾಗಿ, 5,26,817 ಟನ್ ಸರಬರಾಜಾಗಿದೆ.

7.08 ಲಕ್ಷ ಟನ್ ಮಾರಾಟ

ಹಳೇ ಯೂರಿಯಾ 3,46,499 ಟನ್ ದಾಸ್ತಾನು ಉಳಿದಿದೆ. ಕೇಂದ್ರದಿಂದ ಪೂರೈಕೆಯಾದ ಯೂರಿಯಾ ಸೇರಿ ಒಟ್ಟು 8,73,315 ಟನ್ ಒಟ್ಟು ಲಭ್ಯವಿತ್ತು. ಇದರಲ್ಲಿ 7,08,859 ಟನ್ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ವಿತರಿಸಿ, ರೈತರಿಗೂ ಮಾರಾಟ ಮಾಡಲಾಗಿದೆ.

ಇನ್ನೂ 1,64,567 ಟನ್ ಯೂರಿಯಾ ದಾಸ್ತಾನಿದೆ. ಅಲ್ಲದೆ ಕೇಂದ್ರದಿಂದ ಹಂತ ಹಂತವಾಗಿ ಪೂರೈಕೆಯಾಗುವ ರಸಗೊಬ್ಬರವನ್ನು ಆಗಿಂದಾಗಲೇ ಹಂಚಿಕೆ ಮಾಡಿ ವರ್ಗಾಯಿಸುತ್ತೇವೆ ಎಂದು ಚಲುವರಾಯಸ್ವಾಮಿ ವಿವರಿಸಿದರು.

ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಯೂರಿಯಾ ತ್ವರಿತ ಪೂರೈಸಲು ಕೇಂದ್ರ ರಸಗೊಬ್ಬರ ಸಚಿವ ನಡ್ಡಾ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದು, ಕೊರತೆ ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನ್ಯಾನೋ ಪರಿಣಾಮಕಾರಿ

ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ನ್ಯಾನೋ ಯೂರಿಯಾ ಕೂಡ ಲಭ್ಯವಿದ್ದು ಇದು ಸಹ ಹೆಚ್ಚು ಪರಿಣಾಮಕಾರಿ ಮತ್ತು ಲಾಭದಾಯಕ ಎಂಬುದು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ರೈತರು ನಡೆಸಿದ ಪ್ರಯೋಗಗಳು ಸಾಬೀತಾಗಿದ್ದು. ಉಳಿತಾಯ ಕೂಡ ಆಗಲಿದೆ. ಆದ್ದರಿಂದ ರೈತರು ಈ ಬಗ್ಗೆಯೂ ಗಮನಹರಿಸಬೇಕೆಂದು ಹೇಳಿದರು.

ಅತಿಯಾದ ರಸಗಬ್ಬರ ಬಳಕೆ ಭೂಮಿಯ ಫಲವತ್ತತೆ ಹಾಗೂ ಮಾನವನ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರಗಳ ಬಳಕೆ ತಗ್ಗಿಸಿ ಹಸಿರು ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವುದು ಅಗತ್ಯವಿದೆ. ರೈತರಿಗೆ ಈ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.

ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು ಶೇಕಡ 75ರಷ್ಟು ಬಿತ್ತನೆಯಾಗಿದೆ. ಈ ಬಾರಿ ಶೇ.100ರಷ್ಟು ಗುರಿ ಸಾಧಿಸುವ ನಿರೀಕ್ಷೆಯಿದೆ. ಡಿಎಪಿ, ಯೂರಿಯಾ ಲಭ್ಯವಿರುವ ಬಗ್ಗೆ ಲಕ ಪ್ರದರ್ಶಿಸಬೇಕೆಂಬ ಸೂಚನೆ ನೀಡಲಾಗಿದೆ ಎಂದು ಎನ್.ಚಲುವರಾಯಸ್ವಾಮಿ ತಿಳಿಸಿದರು.