Mohan Bhagwat  
ನ್ಯೂಸ್

100 ವರ್ಷದಲ್ಲಿ ಯಾರೂ RSS ನೋಂದಣಿ ಕಡ್ಡಾಯ ಎಂದಿಲ್ಲ: ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ತಿರುಗೇಟು!

ತಿರುವನಂತಪುರಂ: ಸಚಿವ ಪ್ರಿಯಾಂಕ್ ಖರ್ಗೆ ಅವರು RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕಾನೂನುಬದ್ಧ ಸ್ಥಾನಮಾನ, ನೋಂದಣಿ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಪ್ರಶ್ನೆ ಎತ್ತಿದ ಬೆನ್ನಲ್ಲೇ, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬೇಡಿಕೆಯನ್ನು ರಾಜಕೀಯ ತಂತ್ರ ಎಂದು ಕರೆದ ಅವರು, ಇಂತಹ ಪ್ರಶ್ನೆಗಳಿಗೆ ಆರ್‌ಎಸ್‌ಎಸ್‌ ಹೊಸದೇನೂ ಅಲ್ಲ ಎಂದು ಹೇಳಿದ್ದಾರೆ.
ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, “ಇದು ರಾಜಕೀಯ. ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸಲು ಹಲವು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅವರು ಪ್ರಯತ್ನಿಸಲಿ. ನಮಗೆ ಇಂತಹ ಸವಾಲುಗಳು ಹೊಸದಲ್ಲ. ಸಂಘ ಸ್ಥಾಪನೆಯಾದ 15 ವರ್ಷಗಳ ಬಳಿಕವೂ ಇಂತಹ ಪ್ರಶ್ನೆಗಳು ಕೇಳಿಬಂದಿದ್ದವು,” ಎಂದು ಹೇಳಿದರು.
ಆರ್‌ಎಸ್‌ಎಸ್‌ ಕಾರ್ಯಚಟುವಟಿಕೆಗಳು ರಹಸ್ಯವಾಗಿ ನಡೆಯುತ್ತವೆ ಎಂಬ ಆರೋಪವನ್ನೂ ಅವರು ತಳ್ಳಿಹಾಕಿದರು. “ನಮ್ಮ ಎಲ್ಲಾ ಚಟುವಟಿಕೆಗಳು ಸಾರ್ವಜನಿಕವಾಗಿ ನಡೆಯುತ್ತವೆ. ಜನರು ನೋಡುತ್ತಿದ್ದಾರೆ. ಹೀಗಿರುವಾಗ ಅನುಮಾನ ಸೃಷ್ಟಿಸುವುದು ಈಗ ಸಾಧ್ಯವಿಲ್ಲ,” ಎಂದರು.
ಸಂಘದ ನೋಂದಣಿ ಕುರಿತು ಮಾತನಾಡಿದ ಅವರು, “ಆರ್‌ಎಸ್‌ಎಸ್‌ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಆರಂಭವಾಯಿತು. ಹಿಂದೂ ಧರ್ಮವೇ ನೋಂದಣಿಯಾಗಿಲ್ಲ. ದೇಶದಲ್ಲಿ ಹಲವಾರು ಸಂಸ್ಥೆಗಳು ನೋಂದಣಿ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ಅನುದಾನ ಪಡೆಯಬೇಕಾದರೆ ಮಾತ್ರ ನೋಂದಣಿ ಅಗತ್ಯವಾಗುತ್ತದೆ. ಕಳೆದ 100 ವರ್ಷಗಳಲ್ಲಿ ಯಾರೂ ನಮಗೆ ನೋಂದಣಿ ಕಡ್ಡಾಯ ಎಂದು ಹೇಳಿಲ್ಲ,” ಎಂದು ತಿಳಿಸಿದರು.
ಇದೇ ವೇಳೆ, 1960ರ ದಶಕದಲ್ಲೇ ಆರ್‌ಎಸ್‌ಎಸ್‌ ತನ್ನ ಲಿಖಿತ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಸರ್ಕಾರ ಅದನ್ನು ಸ್ವೀಕರಿಸಿತ್ತು, ಆದರೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿರಲಿಲ್ಲ ಎಂದು ಭಾಗವತ್ ಹೇಳಿದ್ದಾರೆ.
ಗಮನಾರ್ಹವಾಗಿ, ಆರ್‌ಎಸ್‌ಎಸ್‌ ಪ್ರಸ್ತುತ ಸೊಸೈಟಿ, ಟ್ರಸ್ಟ್, ಎನ್‌ಜಿಒ ಅಥವಾ ರಾಜಕೀಯ ಪಕ್ಷವಾಗಿ ಅಧಿಕೃತವಾಗಿ ನೋಂದಣಿಯಾಗಿಲ್ಲ. ಈ ಹಿಂದೆ ಭಾಗವತ್, ಆದಾಯ ತೆರಿಗೆ ಇಲಾಖೆ ಮತ್ತು ನ್ಯಾಯಾಲಯಗಳು ಆರ್‌ಎಸ್‌ಎಸ್‌ ಅನ್ನು “ವ್ಯಕ್ತಿಗಳ ಸಂಘ” (Association of Individuals) ಎಂದು ಪರಿಗಣಿಸಿವೆ ಎಂದು ಹೇಳಿದ್ದರು. ಜೊತೆಗೆ ಸಂಘಕ್ಕೆ ಆದಾಯ ತೆರಿಗೆ ವಿನಾಯಿತಿಯೂ ದೊರೆತಿದೆ ಎಂದು ಅವರು ಉಲ್ಲೇಖಿಸಿದ್ದರು.
ಪ್ರಿಯಾಂಕ್ ಖರ್ಗೆ ಅವರ ಪತ್ರ ಮತ್ತು ಮೋಹನ್ ಭಾಗವತ್ ಅವರ ಪ್ರತಿಕ್ರಿಯೆಯಿಂದ ಆರ್‌ಎಸ್‌ಎಸ್‌ನ ಕಾನೂನುಬದ್ಧ ಸ್ಥಾನಮಾನ ಕುರಿತ ಚರ್ಚೆ ಇದೀಗ ಮತ್ತಷ್ಟು ತೀವ್ರಗೊಂಡಿದೆ,(ಏಜೆನ್ಸೀಸ್).