| ಮೃತ್ಯುಂಜಯ ಕಪಗಲ್ ಬೆಂಗಳೂರು
ಕೃಷಿ, ತೋಟಗಾರಿಕೆ, ಕಿರುಧಾನ್ಯಗಳ ಉತ್ಪಾದನೆ ಜತೆಗೆ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಜಾಲ ಅರಿತು ರೈತರು ಬದುಕು ಹಸನು, ಅಭಿವೃದ್ಧಿಯಲ್ಲಿ ಸುಸ್ಥಿರತೆ ಸಾಧಿಸುವ ಉದ್ದೇಶದೊಂದಿಗೆ ಆರಂಭಗೊಂಡ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಗೆ ಅನ್ನದಾತರ ಸ್ಪಂದನೆ ನೀರಸವಾಗಿದೆ. ಕೇಂದ್ರ ಸರ್ಕಾರದ ‘ಸ್ವಾವಲಂಬಿ ಭಾರತ’ ಅಭಿಯಾನದಡಿ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸಹಭಾಗಿತ್ವ ನೀಡಿ ಜಾರಿಗೊಳಿಸಿದೆ. 2 ವರ್ಷ ಕಳೆದರೂ ಸರ್ಕಾರದ ಉಮೇದಿಗೆ ತಕ್ಕ ಸಾಧನೆ ಸಾಧ್ಯವಾಗಿಲ್ಲ. ಬ್ಯಾಂಕ್ಗಳಿಂದ ಸಾಲ ಮಂಜೂರು ವಿಳಂಬ, ಒಟ್ಟು ವೆಚ್ಚದಲ್ಲಿ ಶೇ.10 ಫಲಾನುಭವಿ ಹೂಡಿಕೆ, ಪ್ರಯೋಜನದ ಬಗ್ಗೆ ರೈತರಲ್ಲಿ ಜಾಗೃತಿ ಕೊರತೆ ಮುಂತಾದವುಗಳು ಸಾಧನೆಗೆ ಅಡ್ಡಗಾಲು ಹಾಕಿವೆ.
ಭರಪೂರ ಸಬ್ಸಿಡಿ: ವೈಯಕ್ತಿಕ ಅಥವಾ ಸಮೂಹ ರೂಪದಲ್ಲಿ ಕಿರು ಉದ್ಯಮ ಸ್ಥಾಪಿಸಲು ಬಯಸುವವರಿಗೆ ಅರ್ಹ ಯೋಜನಾ ವೆಚ್ಚದ ಮೇಲೆ ಕೇಂದ್ರ ಶೇ.35 ಹಾಗೂ ರಾಜ್ಯ ಸರ್ಕಾರ ಶೇ.15 ಮೌಲ್ಯದ ಸಾಲ ಸಂಪರ್ಕವಿರುವ ಸಹಾಯಧನ ನೀಡಲಿದೆ. ಸಬ್ಸಿಡಿ ಭರಪೂರ ಲಭ್ಯವಿದ್ದರೂ ಸಾಲ ಪಡೆದವರ ಸಂಖ್ಯೆ ತೀರಾ ಕಡಿಮೆ. ಒಟ್ಟು 604 ಅರ್ಜಿಗಳ ಪೈಕಿ 86 ರೈತರಿಗೆ ಸಾಲ ಸೌಲಭ್ಯ ದೊರೆತಿದ್ದು, ರೈತರ ನಿರಾಸಕ್ತಿಗೆ ಮೊದಲ ಕಾರಣ. ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಹೊಸದಾಗಿ ಆಹಾರ ಸಂಸ್ಕರಣಾ ಘಟಕಗಳು, ಮಾರಾಟ ಮತ್ತು ರಫ್ತು ಉದ್ಯಮಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ.
ಉತ್ಪನ್ನವಾರು ಜಿಲ್ಲೆಗಳ ಸಂಖ್ಯೆ: ‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ’ಯಡಿ ತೋಟಗಾರಿಕೆ ಉತ್ಪನ್ನಗಳು- 18, ಕೃಷಿ ಉತ್ಪನ್ನಗಳು- ಆರು, ಸಮುದ್ರ ಉತ್ಪನ್ನಗಳು- ಎರಡು, ಕೋಳಿ ಸಾಕಾಣಿಕೆ ಹಾಗೂ ಬೇಕರಿ ಉತ್ಪನ್ನಗಳು ತಲಾ ಒಂದು ಜಿಲ್ಲೆ ಗುರುತಿಸಲಾಗಿದೆ.
ಜಿಲ್ಲಾವಾರು ಉತ್ಪನ್ನ: ಬೆಂಗಳೂರು ನಗರ- ಬೇಕರಿ, ಬೆಂಗಳೂರು ಗ್ರಾಮಾಂತರ- ಕೋಳಿ ಸಾಕಾಣಿಕೆ, ಬಾಗಲಕೋಟೆ- ಈರುಳ್ಳಿ, ಬೆಳಗಾವಿ ಮತ್ತು ಮಂಡ್ಯ- ಬೆಲ್ಲ, ಬಳ್ಳಾರಿ- ಅಂಜೂರ, ಬೀದರ್- ಶುಂಠಿ, ಚಾಮರಾಜನಗರ- ಅರಿಶಿನ, ಚಿಕ್ಕಬಳ್ಳಾಪುರ ಹಾಗೂ ಕೋಲಾರ- ಟೊಮೆಟೊ, ದಕ್ಷಿಣಕನ್ನಡ ಹಾಗೂ ಉಡುಪಿ- ಸಾಗರೋತ್ಪನ್ನ, ಚಿತ್ರದುರ್ಗ ಹಾಗೂ ಯಾದಗಿರಿ- ಕಡಲೆಕಾಯಿ, ದಾವಣಗೆರೆ- ಕಿರುಧಾನ್ಯ, ಧಾರವಾಡ ಮತ್ತು ಹಾವೇರಿ- ಮಾವು, ಗದಗ- ಬ್ಯಾಡಗಿ ಮೆಣಸಿನಕಾಯಿ, ತುಮಕೂರು, ಹಾಸನ ಮತ್ತು ರಾಮನಗರ- ತೆಂಗು, ಕಲಬುರಗಿ- ತೊಗರಿ, ಕೊಡಗು- ಕಾಫಿ, ಕೊಪ್ಪಳ- ಸೀಬೆ, ಮೈಸೂರು- ಬಾಳೆಹಣ್ಣು, ರಾಯಚೂರು- ಮೆಣಸಿನಕಾಯಿ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ- ಸಾಂಬಾರ ಪದಾರ್ಥ, ಶಿವಮೊಗ್ಗ- ಅನಾನಸ್, ವಿಜಯಪುರ- ನಿಂಬೆ.
ಹಿಂದೇಟು ಏಕೆ?: ಅರ್ಜಿ ಸಲ್ಲಿಸಿದ ರೈತರಿಗೆ ಸಕಾಲಕ್ಕೆ ಬ್ಯಾಂಕ್ಗಳು ಸಾಲ ಮಂಜೂರು ಮಾಡುತ್ತಿಲ್ಲ. 604ರಲ್ಲಿ 86ಕ್ಕೆ ಸಾಲ ಸೌಲಭ್ಯ ಮಂಜೂರಾಗಿದ್ದರೆ, 243 ಅರ್ಜಿಗಳು ಇನ್ನೂ ಬ್ಯಾಂಕ್ಗಳ ಪರಿಶೀಲನಾ ಹಂತದಲ್ಲೇ ಉಳಿದಿವೆ. ‘ಒಂದು ಜಿಲ್ಲೆ ಒಂದು ಉತ್ಪನ್ನ’ ಪರಿಕಲ್ಪನೆಗೆ ತಕ್ಕಂತೆ ಯೋಜನೆ ರೂಪಿಸಿಕೊಳ್ಳುವುದು ಹಾಗೂ ಫಲಾನುಭವಿ ಗಳ ಪಾಲು ಶೇ.10 ಹಿಂದೇಟಿಗೆ ಕಾರಣ. ಲಭ್ಯ ಅರ್ಜಿಗಳನ್ನು ಮಾನದಂಡದ ಪ್ರಕಾರ ಪರಿಶೀಲಿಸಿ, ಸಾಲ ಮಂಜೂರು ಮಾಡುವಂತೆ ಬ್ಯಾಂಕ್ಗಳಿಗೆ ಶಿಫಾರಸು ಮಾಡಬಹುದೇ ಹೊರತು ಬೇರೇನೂ ಅಧಿಕಾರವಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ.
ಎಂಟು ಜಿಲ್ಲೆಗಳ ಸಾಧನೆ ಶೂನ್ಯ: ಯೋಜನೆಯಡಿ 8 ಜಿಲ್ಲೆಗಳ ಸಾಧನೆ ಶೂನ್ಯವಾಗಿದೆ. ನೆರವು ಬಯಸಿ ಯಾದಗಿರಿ-43, ವಿಜಯಪುರ-29, ಕೊಪ್ಪಳ- 17, ಬೆಳಗಾವಿ, ಚಿತ್ರದುರ್ಗ-15, ರಾಯಚೂರು-7, ಚಾಮರಾಜನಗರ- 5 ಮತ್ತು ಧಾರವಾಡ ಜಿಲ್ಲೆಯಲ್ಲಿ 2 ಅರ್ಜಿ ಸಲ್ಲಿಕೆಯಾಗಿದ್ದು, ಯಾವ ರೈತರಿಗೂ ಸಾಲ ಸೌಲಭ್ಯ ಮಂಜೂರಾಗಿಲ್ಲ.
ತಲಾ ಒಬ್ಬರಿಗೆ ಮಂಜೂರು: ಚಿಕ್ಕಮಗಳೂರು- 29, ಕಲಬುರಗಿ-24, ಬಾಗಲಕೋಟೆ-15, ಗದಗ-11, ದಕ್ಷಿಣಕನ್ನಡ-ಒಂಬತ್ತು ಹಾಗೂ ಮೈಸೂರು-ಆರು ಅರ್ಜಿದಾರರ ಪೈಕಿ ತಲಾ ಒಬ್ಬರಿಗೆ ಸಾಲ ಮಂಜೂರಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಆರು ಅರ್ಜಿದಾರರಲ್ಲಿ ಇಬ್ಬರು, ರಾಮನಗರ-45, ಉತ್ತರಕನ್ನಡ- 22, ಕೊಡಗು-10 ಮತ್ತು ಬಳ್ಳಾರಿ ಜಿಲ್ಲೆಯ ಒಂಬತ್ತು ಅರ್ಜಿದಾರರಲ್ಲಿ ತಲಾ ಮೂವರು ಸಾಲ ಪಡೆದಿದ್ದಾರೆ.
ಸಾಧನೆಯಲ್ಲ, ಸಮಾಧಾನ: ಬೆಂಗಳೂರು ನಗರ- 40 ಅರ್ಜಿದಾರರಲ್ಲಿ 12, ದಾವಣಗೆರೆ- 57ರಲ್ಲಿ ಒಂಬತ್ತು ಅರ್ಜಿದಾರರಿಗೆ ಸಾಲ ಮಂಜೂರಾಗಿದೆ. ಉಡುಪಿ- 30, ಹಾವೇರಿ- ಒಂಬತ್ತರಲ್ಲಿ ತಲಾ ನಾಲ್ಕು, ಶಿವಮೊಗ್ಗ- 17ರಲ್ಲಿ ಐದು, ಬೀದರ್-16, ಹಾಸನ- 23ರಲ್ಲಿ ತಲಾ ಆರು, ಮಂಡ್ಯ-53, ತುಮಕೂರು-22ರಲ್ಲಿ ತಲಾ ಎಂಟು ಮಂದಿ ಸಾಲ ಸೌಲಭ್ಯ ಪಡೆದುಕೊಂಡಿರುವುದು ಸಾಧನೆಯಲ್ಲವಾದರೂ ಸಮಾಧಾನಕರ ಪ್ರಗತಿ.