ನ್ಯೂಸ್

ಕಾಶ್ಮೀರಿ ವಿದ್ಯಾರ್ಥಿಗಳು ದೇಶದ್ರೋಹ ಎಸಗಿದ್ದಕ್ಕೆ ಸಾಕ್ಷ್ಯಾಧಾರಗಳಿಲ್ಲ ಹೈಕೋರ್ಟ್​ ನ್ಯಾಯಪೀಠ ಅಭಿಪ್ರಾಯ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಂಧಿತರಾದ ಕಾಶ್ಮೀರಿ ವಿದ್ಯಾರ್ಥಿಗಳ ವರ್ತನೆಯನ್ನು ದೇಶದ್ರೋಹ ಎಂದು ಪರಿಗಣಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ವಿದ್ಯಾರ್ಥಿಗಳ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದ್ರ ಅವರಿದ್ದ ಪೀಠ, ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ವಿವರಗಳನ್ನು ಗಮಿನಿಸಿದರೆ, ಅವರ ವಿರುದ್ಧ ದೇಶದ ಸಮಗ್ರತೆಗೆ ಧಕ್ಕೆ ಉಂಟಾಗುವ ಕೃತ್ಯ ಎಸಗಿರುವುದಕ್ಕೆ ದಾಖಲೆಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಕಾಶ್ಮೀರಿ ಪ್ರಜೆಗಳು ಈ ದೇಶದ ಮುಖ್ಯವಾಹಿನಿಗೆ ಬರಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಸರ್ಕಾರಿ ವಕೀಲರು ಈ ಪ್ರಕರಣದ ವಿಶಾಲ ಸ್ವರೂಪವನ್ನು ಗ್ರಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿತು.

ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ನೀಡುವ ಸ್ಕಾಲರ್​ಶಿಪ್​ ಪಡೆದು ವಿದ್ಯಾಭ್ಯಾಸಕ್ಕೆ ಬಂದಿದ್ದಾರೆ ಎಂಬುದು ಸತ್ಯ. ಆದರೆ, ಅಧೀನ ನ್ಯಾಯಾಲಯ ಈ ಅಂಶವನ್ನು ಪರಿಗಣಿಸದಿರುವುದು ಅಚ್ಚರಿ ಮೂಡಿಸಿದೆ ಎಂದು ಪೀಠ ತಿಳಿಸಿತು.

ಈ ಪ್ರಕರಣದಲ್ಲಿ ದೂರುದಾರರಾಗಿರುವ ಇಂಜಿನಿಯರಿಂಗ್​ ಕಾಲೇಜಿನ ಪ್ರಾಂಶುಪಾಲರೇ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನೀಡಬಹುದಾಗಿತ್ತು. ಅವರು ಅಲ್ಲಿಗೆ ಬಂದಿರುವ ಉದ್ದೇಶವನ್ನು ಮನವರಿಕೆ ಮಾಡಿ ಕೊಡಬಹುದಿತ್ತು. ಆರೋಪಿಗಳು, ಹದಿಹರೆಯದವರೋ ಅಥವಾ ಹದಿಹರೆಯದಿಂದ ಈಗಷ್ಟೇ ಹೊರಗೆ ಬಂದಿದ್ದಾರೋ ಎನ್ನುವುದಕ್ಕಿಂತ ಅವರು ಕೇಂದ್ರ ಸರ್ಕಾರದಿಂದ ಪ್ರಾಯೋಜಿತ ಸ್ಕಾಲರ್​ಶಿಪ್​ ಪಡೆದು ವ್ಯಾಸಂಗಕ್ಕೆ ಬಂದಿದ್ದಾರೆ. ಆದರೆ, ಅವರು ಮಾಡಿರುವ ಕೃತ್ಯ ಕೇಂದ್ರ ಸರ್ಕಾರದ ಉದಾತ್ತ ಆಶಯವನ್ನು ಮರೆಮಾಚುವುದಿಲ್ಲ. ಆದರೆ, ಈ ದೂರಾಲೋಚನೆಗಳು ಸಂಕುಚಿತ ದೃಷ್ಟಿಕೋನದಿಂದಾಗಿ ಮುಚ್ಚಿಹೋಗಿವೆ ಎಂದು ಅಭಿಪ್ರಾಯಪಟ್ಟಿತು. ವಿಚಾರಣೆಯನ್ನು ಏಪ್ರಿಲ್​ 24ಕ್ಕೆ ಮುಂದೂಡಿತು.

ಘಟನೆ ಹಿನ್ನೆಲೆ: ಕಾಶ್ಮೀರಿ ಯುವಕರಾದ ಬಸಿತ್​ ಆಶಿಕ್​ ಸೋಫಿ, ತಲಿಬ್​ ಮಜೀದ್​, ಅಮೀರ್​ ಮೋಹಿ ಉದ್ದಿನ್​ ವಾನಿ ಹುಬ್ಬಳ್ಳಿಯ ಇಂಜಿಯನಿರಿಂಗ್​ ಕಾಲೇಜಿನ ವಿದ್ಯಾರ್ಥಿಗಳು. ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದ್ದು, ಫೆಬ್ರವರಿ 17ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.