ಬೆಂಗಳೂರು: ಜನತಾ ದರ್ಶನದ ಹೆಸರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ರಾಜಕಾರಣ ಮಾಡಬಾರದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ಕೊಟ್ಟರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜೊತೆಯೂ ಅಧಿಕಾರಿಗಳು ನಿಂತುಕೊಳ್ಳಬೇಕು ಎಂದು ಕುಮಾರಸ್ವಾಮಿ ಅಂದುಕೊಳ್ಳುವುದು ಸರಿಯಲ್ಲ. ರಾಜಕಾರಣ ಮಾಡುವುದು ನನಗೂ ಗೊತ್ತಿದೆ. ರಾಷ್ಟ್ರದ ತುಂಬಾ ಕೆಲಸಕೊಟ್ಟಿದ್ದರೂ ರಾಜ್ಯದಲ್ಲಿ ಏಕೆ ರಾಜಕಾರಣ ಮಾಡುತ್ತಿದ್ದಾರೆ ಅಂತಾ ಗೊತ್ತಿಲ್ಲ ಎಂದರು.
ಕುಮಾರಸ್ವಾಮಿ ಕೇವಲ ಮಂಡ್ಯಗೆ ಮಾತ್ರ ಸೀಮಿತವಲ್ಲ, ಇಡೀ ದೇಶಕ್ಕೆ ಅವರು ಮಂತ್ರಿಯಾಗಿದ್ದಾರೆ. ಕಾವೇರಿ ವಿಚಾರದಲ್ಲಿ ಕರೆದರೆ ನಮ್ಮಿಂದ ಏನು ಮಾಹಿತಿ ಬೇಕು ಕೊಡುತ್ತೇವೆ. ಪ್ರಧಾನಿ ಬಳಿ ನಿಯೋಗ ಬರಬೇಕು ಎಂದರೆ ನಾನೇ ಮುಂದೆ ನಿಂತು ಎಲ್ಲ ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿ ನೀರಾವರಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿ, ನಿರುದ್ಯೋಗಿ ಯುವಕರಿಗೆ ಒಂದು ತಿಂಗಳಲ್ಲಿ ಉದ್ಯೋಗ ಕೊಡಿಸಲಿ. ಕೇಂದ್ರದಿಂದ ಬರಬೇಕಾದ ಯೋಜನೆಗಳನ್ನು ಕೊಡಿಸಲಿ. ಶಾಸಕರು ಹಾಗೂ ಸಿಎಂ ಮಾಡುವ ಕೆಲಸವನ್ನು ಕುಮಾರಸ್ವಾಮಿ ಏಕೆ ಮಾಡುತ್ತಾರೆ? ಲೋಕಸಭೆ ಸದಸ್ಯರಿಗೆ ಆಸಕ್ತಿ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಭೆ ನಡೆಸಿ ಮಾಹಿತಿ ಪಡೆಯಲಿ ಎಂದರು.
ನಾನು ಅವರಿಗೆ ಗೈಡ್ ಮಾಡುವಷ್ಟು ದೊಡ್ಡವನಲ್ಲ. ರಾಜಕಾರಣ ಇಷ್ಟೊಂದು ಮಾಡೋದು ಬೇಡ. ಅವರ ಜೊತೆ ಕೂಡ ನಾನು ಕೆಲಸ ಮಾಡಿದ್ದೀನೆ. ರಾಷ್ಟ್ರದಲ್ಲಿ ಕೈತುಂಬಾ ಕೆಲಸ ಇವೆ. ಅದನ್ನು ಮಾಡುವುದು ಬಿಟ್ಟು ರಾಜಕಾರಣ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಸರ್ಟಿಫಿಕೇಟ್ ನಾವು ಕೇಳಿಲ್ಲ. ಜನರಿಂದ ಮಾತ್ರ ಸರ್ಟಿಫಿಕೇರ್ಟ್ ಕೇಳುತ್ತೇವೆ. ಅವರ ಜವಾಬ್ದಾರಿ ಗೊತ್ತಿಲ್ಲ ಅನಿಸುತ್ತದೆ. ಅವರ ಕೆಲಸದ ವ್ಯಾಪ್ತಿ ಏನು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಲಿ. ಅವರು ಪವರ್ ಫುಲ್ ಮಿನಿಸ್ಟರ್. ವಿಶೇಷ ಅಧಿಕಾರ ಇದ್ದರೆ ನಮ್ಮ ರಾಜ್ಯದ ಯೋಜನೆ ಗೆ ಹಣ ಕೊಡಿಸಲಿ. ಮಹದಾಯಿ, ಕಾವೇರಿ ಮತ್ತು ರೈಲ್ವೇ ಯೋಜನೆಗಳಿಗೆ ಹಣ ನೀಡಲಿ. ಶಾಸಕರು , ಸಚಿವರು ಹಾಗೂ ಸಿಎಂ ಮಾಡುವ ಕೆಲಸ ಇವರು ಮಾಡುತ್ತಿದ್ದಾರೆ. ಅದನ್ನು ಬಿಟ್ಟು ರಾಜ್ಯಕ್ಕೆ ಬರೋ ಯೋಜನೆಗಳನ್ನ ಪೂರ್ಣ ಮಾಡಲಿ ಎಂದು ವ್ಯಂಗ್ಯವಾಡಿದರು.
ಈ ರೀತಿ ಜನತಾ ದರ್ಶನ ಮಾಡುವ ಮೂಲಕ ಹೊಸ ಪದ್ಧತಿ ಹುಟ್ಟುಹಾಕಲು ಹೊರಟಿದ್ದಾರೆ. ನಾನು ಅವರಿಗೆ ಸವಾಲು ಹಾಕುವುದಿಲ್ಲ. ಸರ್ಕಾರದ ಗೈಡ್ ಲೈನ್ಸ್ ಹೇಗೆ ಇರುತ್ತದೆ ಎಂಬುದು ಅವರಿಗೂ ಚೆನ್ನಾಗಿ ಗೊತ್ತು. ಆದಾಗ್ಯೂ ರಾಜಕಾರಣ ಮಾಡಿದರೆ ಹೇಗೆ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು.