ನ್ಯೂಸ್

ಕರ್ನಾಟಕದಲ್ಲಿ ಕನ್ನಡ ಸಾಂಗ್ ಹಾಕಲು ಯಾರ ಅನುಮತಿ ಬೇಕಿಲ್ಲ; ಪೊಲೀಸ್ ಕಮಿಷನರ್ ಬಿ. ದಯಾನಂದ್

ಬೆಂಗಳೂರು: ಪಬ್‌ಗಳಲ್ಲಿ ಹಿಂದಿ, ಇಂಗ್ಲಿಷ್ ಹಾಡುಗಳನ್ನು ಮಾತ್ರ ಹಾಕಬೇಕು. ಕನ್ನಡ ಸಾಂಗ್‌ಗೆ ನಿರ್ಬಂಧ ಎಂಬ ನಿಯಮ ಎಲ್ಲಿಯೂ ಇಲ್ಲ. ಕರ್ನಾಟಕದಲ್ಲಿ ಕನ್ನಡ ಸಾಂಗ್ ಹಾಕಲು ಯಾರ ಅನುಮತಿಯೂ ಬೇಕಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸ್ಪಷ್ಟಪಡಿಸಿದರು.

ಸೇಂಟ್ ಜಾನ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಜನರ ಹಲವು ಅಹವಾಲುಗಳನ್ನು ಬಿ. ದಯಾನಂದ್ ಆಲಿಸಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರೆ ಇನ್ನೂ ಕೆಲವು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.ಈ ವೇಳೆ ವ್ಯಕ್ತಿಯೊಬ್ಬರು ಪಬ್‌ನಲ್ಲಿ ಹಿಂದಿ, ಇಂಗ್ಲಿಷ್ ಮಾತ್ರ ಸಾಂಗ್ ಮಾತ್ರ ಹಾಕುತ್ತಾರೆ. ಕನ್ನಡ ಸಾಂಗ್ ಹಾಕುವಂತೆ ಕೇಳಿದರೇ ಅನುಮತಿ ಇಲ್ಲ ಎನ್ನುತ್ತಾರೆ. ಯಾರ ಬಳಿ ಅನುಮತಿ ಪಡೆಯಬೇಕೆಂದು ಕೇಳಿದಾಗ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದರು. 

ಪಾದಚಾರಿ ಮಾರ್ಗದಲ್ಲಿ ಅನಗತ್ಯವಾಗಿ ಮತ್ತು ಹಳೆಯ ನೇಮ್ ಬೋರ್ಡ್, ಸಿಗ್ನಲ್ ಬೋರ್ಡ್ ಎಲ್ಲೆಲ್ಲಿವೆ. ಅವು ಯಾವ ಇಲಾಖೆಗೆ ಸೇರಿದ ಬೋರ್ಡ್‌ಗಳು ಎಂದು ಮಾಹಿತಿ ಕಲೆ ಹಾಕುವಂತೆ ಸಂಚಾರ ಪೊಲೀಸರಿಗೆ ಸೂಚನೆ ನೀಡಿದರು. ಪೊಲೀಸ್ ಇಲಾಖೆಗೆ ಸೇರಿದ ಕಂಬಗಳು ಆಗಿದ್ದಲ್ಲಿ ತಕ್ಷಣ ತೆರವು ಮಾಡಬೇಕು. ಇಲ್ಲವಾದರೆ, ಬೆಸ್ಕಾಂ, ಬಿಬಿಎಂಪಿ ಇನ್ನಿತರ ಸಂಸ್ಥೆಗಳಿಗೆ ಸೇರಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತೆರವು ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಪೊಲೀಸ್ ಆಯುಕ್ತರು ಕಟ್ಟಪ್ಪಣೆ ಮಾಡಿದರು.     

ಹಾಲಿನ ವಾಹನಗಳ ವೇಗಕ್ಕೆ ತಡೆ:

ಹೊಸೂರು ರಸ್ತೆ ಡೇರಿ ವೃತ್ತದಲ್ಲಿರುವ ಕೆಎಂಎ್ ಹಾಲಿನ ವಾಹನ ಚಾಲಕರು ಬೆಳಗಿನ ಜಾವ ಓನ್‌ವೇನಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುತ್ತಾರೆ. ಇದರಿಂದ ಇತರ ವಾಹನ ಚಾಲಕ,ಸವಾರರಿಗೆ ಭಯ ಭೀತಿ ಉಂಟಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಆಯುಕ್ತರಿಗೆ ದೂರಿದರು. ಅದಕ್ಕೆ ಬಿ.ದಯಾನಂದ್, ಅಲ್ಲೇ ಇದ್ದ ಸಂಚಾರ ಪೊಲೀಸ್ ವಿಭಾಗ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳಿಗೆ ಈ ವಿಷಯ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟು ಹಾಲಿನ ವಾಹನಗಳ ಅಡ್ಡಾದಿಟ್ಟಿ ಸಂಚಾರಕ್ಕೆ ಬ್ರೇಕ್ ಹಾಕಬೇಕೆಂದು ಸೂಚಿಸಿದರು.
ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ಪೊಲೀಸರು ಭೇಟಿ ನೀಡುವುದು ಕೆಲವೊಂದು ಸಮಯದಲ್ಲಿ ಸೂಕ್ತವಲ್ಲ. ಆದ್ದರಿಂದ ಡ್ರಗ್ಸ್ ಸೇವನೆ ಕುರಿತು ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಜಾಗೃತಿ ಮೂಡಿಸಬೇಕು. ಪಾಲಕರ ಸಭೆ ಇದ್ದಾಗ ಸ್ಥಳೀಯ ಪೊಲೀಸರಿಗೂ ಆಹ್ವಾನ ನೀಡಿದರೆ ಅಧಿಕಾರಿಗಳು ಅಲ್ಲಿಗೆ ಆಗಮಿಸಿ ಅರಿವು ಮೂಡಿಸಬಹುದು ಎಂದು ಪೊಲೀಸ್ ಆಯುಕ್ತ ಭರವಸೆ ನೀಡಿದರು.

ಸಾಮಾನ್ಯ ಜ್ಞಾನವಷ್ಟೇ 

ಸೈಬರ್ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಮಾನ್ಯ ಜ್ಞಾನ ಇದ್ದರೇ ಸಾಕು. ಪ್ರತಿದಿನ ತರಕಾರಿ ಖರೀದಿಸುವಾಗ ಚೆನ್ನಾಗಿ ಇದೀಯ ಎಂದು ಪರೀಕ್ಷಿಯೇ ಖರೀದಿಸುತ್ತೇವೆ. ಕಷ್ಟಪಟ್ಟು ದುಡಿಯದೆ ಹಣ ಸಿಗುವುದಿಲ್ಲ ಎಂಬುದು ಗೊತ್ತು. ಆದರೂ, ನಮ್ಮ ಜನ ಯಾವುದು ಸರಿ ಯಾವುದು ತಪ್ಪು ಎಂದು ಯೋಜನೆ ಮಾಡದೆ ಮೊಬೈಲ್‌ಗೆ ಬಂದ ಲಿಂಕ್ ಮೇಲೆ ಒತ್ತಿ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂದ ತಕ್ಷಣವೇ ಹಣ ಹೂಡಿಕೆ ಮಾಡುತ್ತಾರೆ. ಅದಕ್ಕಾಗಿ ಸಾಮಾನ್ಯ ಜ್ಞಾನ ಉಪಯೋಗಿಸಿದರೆ ಸಾಕು ಸೈಬರ್ ಕ್ರೈಂಯಿಂದ ದೂರ ಉಳಿಯಬಹುದು ಎಂದು ಪೊಲೀಸ್ ಆಯುಕ್ತರು ತಿಳಿವಳಿಕೆ ನೀಡಿದರು. 

ಬಾಡಿಗೆದಾರರಿಗೆ ಆ್ಯಪ್ : 

ಸಿಲಿಕಾನ್ ಸಿಟಿಯಲ್ಲಿ ಮನೆಗಳನ್ನು ಬಾಡಿಗೆ ನೀಡುವ ಮತ್ತು ಪೇಯಿಂಗ್ ಗೆಸ್ಟ್ ಮಾಲೀಕರಿಗೆ ಪೊಲೀಸ್ ಇಲಾಖೆಯಿಂದ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಕಟ್ಟಡ ಮಾಲೀಕರು ತಮ್ಮ ಬಾಡಿಗೆದಾರರ ವಿವರನ್ನು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದರೇ ಅವರ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದರು.