ಚಂಡೀಗಢ: ಅಮೃತಸರದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸ ಮಾಡಿದ ದುಷ್ಕರ್ಮಿಗಳ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೀವ್ರವಾಗಿ ಖಂಡಿಸಿದ್ದಾರೆ. ಧ್ವಂಸ ಕೃತ್ಯದ ಹಿಂದೆ ಯಾರ ಕೈವಾಡವಿದೆ, ಆರೋಪಿಗಳು ಯಾರು ಎಂಬುದು ಸದ್ಯದ ಮಟ್ಟಿಗೆ ತಿಳಿಯದ ಹಿನ್ನೆಲೆ ಸಿಎಂ ಕೆರಳಿದ್ದಾರೆ. ಈ ವಿಷಯದಲ್ಲಿ ಯಾರನ್ನೂ ಕ್ಷಮಿಸುವುದಿಲ್ಲ ಎಂದು ಗುಡುಗಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಈ ಘಟನೆ ನಡೆದಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ಇದು ಅತ್ಯಂತ ಖಂಡನೀಯ ಮತ್ತು ಹೊಣೆಗಾರರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಮ್ಮ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ದುಷ್ಕರ್ಮಿಗಳನ್ನು ಬಿಡುವುದಿಲ್ಲ" ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಹಂಚಿಕೊಂಡ ಭಗವಂತ್ ಮಾನ್, "ಅಮೃತಸರದ ಸಾಹಿಬ್‌ನ ಪರಂಪರೆಯ ಬೀದಿಯಲ್ಲಿ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ಅತ್ಯಂತ ಖಂಡನೀಯ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಕ್ಷಮಿಸಲಾಗುವುದಿಲ್ಲ. ಘಟನೆಗೆ ಕಾರಣರಾದವರನ್ನೂ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು. ಪಂಜಾಬ್‌ನ ಸಹೋದರತ್ವ ಮತ್ತು ಏಕತೆಯನ್ನು ಮುರಿಯಲು ಯಾರಿಗೂ ಇಲ್ಲಿ ಅವಕಾಶವಿಲ್ಲ. ಇದನ್ನು ತನಿಖೆ ಮಾಡಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).