ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ನಾವು ಯಾರನ್ನೂ ಕರೆಯುವುದಿಲ್ಲ. ಆಪರೇಷನ್ ಮಾಡಿ ಸೇರ್ಪಡೆಯನ್ನೂ ಮಾಡಿಕೊಳ್ಳುವುದಿಲ್ಲ. ಹಾಗೆಯೇ ಯಾರಾದರೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುತ್ತೇವೆ ಎಂದರೆ ಅವರನ್ನು ತಡೆಯುವುದೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಸೇರುವಾಗ ಬಿಜೆಪಿಯನ್ನು ಯಾವರೀತಿ ನಿಂದಿಸಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಾಗ ಕಾಂಗ್ರೆಸ್ ಬಗ್ಗೆ ಒಳ್ಳೆಯ ರೀತಿಯಲ್ಲೇ ಮಾತನಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿಕ್ಕಮಗಳೂರು ಡಿಸಿ ಕಚೇರಿ ಎದುರು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹೋಮ ನಡೆಸಲು ಪ್ರಯತ್ನಿಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಐವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಸ್ಪಿ ಡಾ. ವಿಕ್ರಮ ಅಮಟೆ ಮಾತನಾಡಿ, ಹೋಮ ನಡೆಸಲು ಯತ್ನ ಮತ್ತು ಕಚೇರಿ ಒಳಗೆ ನುಗ್ಗಲು ಯತ್ನಿಸಿದ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಅವರನ್ನು ಬಂಧಿಸಲಾಗಿದೆ. ವಿಡಿಯೋ ಪರಿಶೀಲನೆ ನಡೆಸಿ ತಪ್ಪು ಮಾಡಿರುವ ಇನ್ನಷ್ಟು ಜನರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಕುಸುಮ್ ಯೋಜನೆ ಅನುಷ್ಠಾನ:
ಕುಸುಮ್ ಯೋಜನೆಯಡಿ ಜಿಲ್ಲೆಯ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಮೂಲಕ ವಿದ್ಯುತ್ ಸರಬರಾಜು ಮಾಡಲು ಜಿಲ್ಲೆಯಲ್ಲಿ 167 ಎಕರೆ ಜಮೀನು ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಚಿಕ್ಕಮಗಳೂರು ತಾಲೂಕಿನಲ್ಲಿ 27.20 ಎಕರೆ, ತರೀಕೆರೆ ತಾಲೂಕಿನ ದೋರನಾಳು ಗ್ರಾಮ, ಕಡೂರು ತಾಲೂಕು, ಅಜ್ಜಂಪುರ ತಾಲೂಕಿನಲ್ಲಿ ತಲಾ 10 ಎಕರೆ ಭೂಮಿ ಗುರುತಿಸಲಾಗಿದೆ. ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಬೇಕು. ಜಂಟಿಯಾಗಿ ಸ್ಥಳ ತನಿಖೆ ನಡೆಸಿ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸುವಂತೆ ನಾಲ್ಕು ತಾಲೂಕುಗಳ ತಹಸೀಲ್ದಾರ್‌ಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನೆರೆ ಪರಿಹಾರ ದುರ್ಬಳಕೆ ಪ್ರಕರಣ ತನಿಖೆ:
ಕಡೂರು ತಾಲೂಕಿನ ಅಂತರಘಟ್ಟೆ, ಕಲ್ಕೆರೆ ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ಹಾಗೂ ನೌಕರರು ಮಧ್ಯವರ್ತಿಗಳ ಜತೆ ಸೇರಿ ನೆರೆ ಪರಿಹಾರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣವನ್ನು ತನಿಖೆ ಮಾಡಿಸಲಾಗುವುದು ಎಂದು ಕೆ.ಜೆ.ಜಾರ್ಜ್ ತಿಳಿಸಿದರು. ಈ ಬಗ್ಗೆ ತನಿಖೆ ನಡೆಸಲು ತರೀಕೆರೆ ಎಸಿ ಕಾಂತರಾಜ್ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ತಂಡವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ತನಿಖೆ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಡಿಸಿ ಕಚೇರಿ ಸಂಕೀರ್ಣಕ್ಕೆ 15 ಕೋಟಿ ರೂ.:
ಡಿಸಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಅಲ್ಲದೆ ಶೃಂಗೇರಿ ತಾಲೂಕು ಕಚೇರಿ ಕಟ್ಟಡಕ್ಕೆ 16.50 ಲಕ್ಷ ರೂ., ತರೀಕೆರೆ ತಾಲೂಕು ಕಚೇರಿ ಕಟ್ಟಡದ ದುರಸ್ತಿಗೆ 8 ಲಕ್ಷ ರೂ., ಕೊಪ್ಪ ತಾಲೂಕಿನ ತಾಲೂಕು ಕಚೇರಿ ಕಟ್ಟಡದ 2ನೇ ಮಹಡಿ ನಿರ್ಮಾಣಕ್ಕೆ 2.5 ಕೋಟಿ ರೂ., ಮೂಡಿಗೆರೆ ತಾಲೂಕು ಕಚೇರಿ ಕಟ್ಟಡದ ದುರಸ್ತಿಗೆ ಒಂದು ಕೋಟಿ ರೂ. ಹಾಗೂ ಕಡೂರು ತಾಲೂಕು ಕಚೇರಿ ರೆಕಾರ್ಡ್ ರೂಮ್ ದುರಸ್ತಿಗೆ 47 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.