ನ್ಯೂಸ್

ಯಾರೂ ಅನಿವಾರ್ಯ ಅಲ್ಲ

ಬಾಬುಪ್ರಸಾದ್​ ಮೋಡಿಸ್​

| ಪ್ರಣೇತ್ರಿ ಮಳಗಿ

ಹಿಂದಿನ ಕಾಲದಲ್ಲಿ ಒಂದೂರಲ್ಲಿ ಅಜ್ಜಿಯೊಬ್ಬಳಿದ್ದಳು. ಅವಳು ಒಂದು ಕೋಳಿಯನ್ನು ಸಾಕಿದ್ದಳು. ಪ್ರತಿದಿನ ಬೆಳಗಿನ ಜಾವ ಸೂರ್ಯೋದಯದ ಸಮಯಕ್ಕೆ ಕೋಳಿ ಕೂಗುತ್ತಿತ್ತು. ಊರಿನ ಜನರೆಲ್ಲ ಎದ್ದು ತಮ್ಮ ದಿನ ನಿತ್ಯದ ಕಾರ್ಯಗಳಿಗೆ ಸಜ್ಜಾಗುತ್ತಿದ್ದರು. ಅಷ್ಟೇ ಅಲ್ಲದೆ ಈ ಅಜ್ಜಿಯ ಹತ್ತಿರ ಅಗ್ಗಿಷ್ಟಿಕೆ ಇರುತ್ತಿತ್ತು. ಊರಿನ ಎಲ್ಲ ವಾಸಿಗಳು ಅಜ್ಜಿಯ ಹತ್ತಿರ ಬಂದು ಒಂದೆರಡು ಕೆಂಡವನ್ನು ತೆಗೆದುಕೊಂಡು, ಮನೆಗೆ ಹೋಗಿ ಒಲೆ ಹೊತ್ತಿಸಿ, ಅಡುಗೆಯನ್ನು ಮಾಡಿಕೊಳ್ಳುತ್ತಿದ್ದರು. ಆಗಿನ್ನೂ ಬೆಂಕಿಪೊಟ್ಟಣದ ಆವಿಷ್ಕಾರ ಆಗಿರಲಿಲ್ಲ.

ಹೀಗೆ ಒಂದು ದಿನ ತನ್ನ ದಿನನಿತ್ಯದ ಕೆಲಸ ಮುಗಿಸಿ ಹಾಗೇ ಸುಮ್ಮನೆ ಕುಳಿತ ಅಜ್ಜಿಗೆ, ‘ಈ ಊರಿನ ಜನ ತಮ್ಮ ಕೆಲಸಕ್ಕೆ ಬೇಕಾದಾಗ ಮಾತ್ರ ನನ್ನ ಬಳಿ ಬರುತ್ತಾರೆ, ನನ್ನ ಸಹಾಯ ಪಡೆದ ಇವರಿಗೆ ನನ್ನ ಮಹತ್ವದ ಅರಿವು ಮೂಡಿಸಬೇಕು’ ಎನ್ನಿಸಿತು. ಮರುದಿನ ಸಾಯಂಕಾಲ ತನ್ನ ಸಾಕು ಕೋಳಿ ಮತ್ತು ಅಗ್ಗಿಷ್ಟಿಕೆ ತೆಗೆದು ಊರಿನ ಆಚೆಗಿರುವ ದಟ್ಟ ಅಡವಿಯಲ್ಲಿ ಬಂದು ಕುಳಿತಳು. ಊರಿನ ಜನರೆಲ್ಲ ತನ್ನನ್ನು ಹುಡುಕುತ್ತ ಬಂದು ಮನವೊಲಿಸಿ ಮರ್ಯಾದೆಯಿಂದ ಊರಿಗೆ ಕರೆದೊಯ್ಯುತ್ತಾರೆ ಎಂಬುದು ಅಜ್ಜಿಯ ಲೆಕ್ಕಾಚಾರವಾಗಿತ್ತು.

ಆದರೆ 2-3 ದಿನ ಕಳೆದರೂ ಅಜ್ಜಿಯನ್ನು ಹುಡುಕಿಕೊಂಡು ಯಾರೂ ಬರಲೇ ಇಲ್ಲ. ನಂತರ ಕಾಕತಾಳೀಯವೆಂಬಂತೆ ಊರಿನ ಯುವಕನೊಬ್ಬ ಉರುವಲಿಗಾಗಿ ಕಟ್ಟಿಗೆ ತೆಗೆದುಕೊಂಡು ಹೋಗಲು ಅಡವಿಗೆ ಬಂದ. ಆತ ಬರುತ್ತಿದ್ದ್ದದನ್ನು ಕಂಡ ಅಜ್ಜಿಗೆ ಜೀವ ಬಂದಂತಾಯಿತು. ಅವನನ್ನು ಕರೆದು, ‘ಏನಯ್ಯಾ ಊರಲ್ಲಿ ಎಲ್ಲರೂ ಹೇಗಿದ್ದಾರೆ? ಪ್ರತಿದಿನ ಬೆಳಗಿನ ಜಾವ ಸೂರ್ಯೋದಯದ ಆಗುತ್ತಿದೆಯೆ? ಎಲ್ಲರೂ ಊಟ ಮಾಡಿಕೊಂಡಿದ್ದಾರೆಯೇ?’ ಎಂದು ಕೇಳಿದಳು. ಆತ ನಕ್ಕು, ‘ಅಯ್ಯೋ ಅಜ್ಜಿ, ನೀನು ನಿನ್ನ ಕೋಳಿ ಇದ್ದರೆ ಮಾತ್ರ ಬೆಳಗಾಗುತ್ತೆ ಅಂದುಕೊಂಡೆಯಾ? ನಿನ್ನ ಅಗ್ಗಿಷ್ಟಿಕೆಯ ಕೆಂಡ ಇದ್ದರೆ ಮಾತ್ರ ಜನ ಅಡುಗೆ ಮಾಡುತ್ತಾರೆ ಅಂತ ಭಾವಿಸಿದೆಯಾ? ನೀನು ಊರಲ್ಲಿ ಇಲ್ಲದ್ದರಿಂದ ನಾವು ಕಲ್ಲುಗಳನ್ನು ಹೊಸೆದು ಬೆಂಕಿ ಹುಟ್ಟಿಸಿ ಒಲೆ ಹೊತ್ತಿಸಿಕೊಳ್ಳುತ್ತಿದ್ದೇವೆ’ ಎಂದ. ಅಜ್ಜಿಗೆ ತನ್ನ ಮೂರ್ಖತನದ ಅರಿವಾಗಿ ನಾಚಿಕೆಯಾಯಿತು.

ಇದರಿಂದ ತಿಳಿಯಬೇಕಾದ ತತ್ವ ಏನೆಂದರೆ, ಜೀವನದಲ್ಲಿ ನಮ್ಮಿಂದ ಅನೇಕರು ಉಪಕೃತಗೊಂಡಿರುತ್ತಾರೆ. ಹಾಗೆಂದಾಕ್ಷಣ, ನಮ್ಮಿಂದ ಉಪಕೃತಗೊಂಡಿರುವವರು ಪ್ರತಿದಿನ ನಮ್ಮನ್ನು ಸ್ತುತಿಸುತ್ತಿರಬೇಕು ಎಂದಲ್ಲ. ನಾವೂ ಇತರರಿಂದ ಸಹಾಯವನ್ನು ಪಡೆದಿರುತ್ತೇವಾದರೂ ನಮಗೆ ಸಹಾಯ ಮಾಡಿದವರನ್ನು ಪ್ರತಿದಿನ ಹೊಗಳುತ್ತಿರಬೇಕೆಂದೇನಿಲ್ಲ. ಆದರೆ ಉಪಕಾರ ಮಾಡಿದವರನ್ನು ಮರೆಯುವುದು ಕೃತಘ್ನತೆ. ‘ಇಟ್ಟದ್ದು ಪರರಿಗೆ, ಕೊಟ್ಟದ್ದು ತನಗೆ’ ಎಂಬಂತೆ ನಾವು ಮಾಡಿದ ದಾನ, ಸಹಾಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕೇ ವಿನಃ ಹೊರಜಗತ್ತಿಗೆ ತೋರಿಸಬಾರದು. ಎಡಗೈಯಿಂದ ಕೊಟ್ಟ ದಾನ ಬಲಗೈಗೂ ಗೊತ್ತಾಗಬಾರದೆಂಬ ಹಿರಿಯರ ಅನುಭವದ ನುಡಿ ಎಷ್ಟು ಸತ್ಯ!

(ಲೇಖಕರು ಹವ್ಯಾಸಿ ಬರಹಗಾರರು)