ಸೊರಬ: ಸೊರಬ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿದೆ.
2021ರಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಸುತ್ತಮುತ್ತಲಿನ ಗ್ರಾಮ ಹಾಗೂ ಗ್ರಾಪಂನ ಕೆಲ ಹಳ್ಳಿಗಳನ್ನು ಸೇರಿಸಿ 23 ವಾರ್ಡ್ ರಚಿಸಲಾಗಿದೆ. ಪಟ್ಟಣ ಪಂಚಾಯಿತಿ ಸದಸ್ಯರನ್ನೇ ಪುರಸಭೆಗೆ ಮುಂದುವರಿಸಲಾಗಿದೆ. 12 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 4, ಜೆಡಿಎಸ್ 1 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಪುರಸಭೆ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಯಾವ ಪಕ್ಷದಲ್ಲೂ ಈ ಮೀಸಲಾತಿಯಿಂದ ಗೆದ್ದವರು ಯಾರೂ ಇಲ್ಲ. ಮೀಸಲು ನಿರ್ಧಾರ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಬಂದಿರುವುದರಿಂದ ಶ್ರೀರಂಜನಿ, ಸುಲ್ತಾನ ಬೇಗಂ ಹಾಗೂ ಆಫ್ರಿನ್(ಕಾಂಗ್ರೆಸ್) ಸದಸ್ಯರು, ಪ್ರೇಮಾ ಟೋಕಪ್ಪ(ಜೆಡಿಎಸ್), ಜಯಲಕ್ಷ್ಮೀ(ಬಿಜೆಪಿ) ಸದಸ್ಯರಿದ್ದಾರೆ. ಪ್ರೇಮಾ ಟೋಕಪ್ಪ ಎರಡು ಸಲ ಬಿಜೆಪಿ ಬೆಂಬಲಿತ ಅಧ್ಯಕ್ಷರಿಗೆ ಬೆಂಬಲ ನೀಡಿದ್ದರು. ಈಗ ಮಧು ಬಂಗಾರಪ್ಪ ಸಚಿವರಾದ ಬಳಿಕ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಪಟ್ಟಣ ಪಂಚಾಯಿತಿ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಆಗಿತ್ತು. ಬಿಜೆಪಿ ಬೆಂಬಲಿತರಲ್ಲಿ ಒಮ್ಮತ ಇಲ್ಲದೆ ಕೆಲ ಸದಸ್ಯರು ಎಂ.ಡಿ.ಉಮೇಶ್ ಅವರನ್ನು ಕೆಳಗಿಳಿಸಿ ವೀರೇಶ್ ಮೇಸ್ತ್ರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಪುರಸಭೆ ಅವಧಿ 14 ತಿಂಗಳಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಸದಸ್ಯೆ ಇಲ್ಲದ ಕಾರಣ ಮೀಸಲು ಬದಲಾಗಬೇಕಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದರೆ ಆಯಾ ಪಕ್ಷಗಳ ಮುಖಂಡರು ನಿರ್ಧಾರ ಮಾಡಬೇಕಿದೆ.