ವಿಧಾನಸಭೆಯಲ್ಲಿ ಬುಧವಾರ ಸಚಿವರಿಗೆ ಬೇಡಿಕೆಯಿತ್ತ ಶಾಸಕರು. 
ನ್ಯೂಸ್

ಸ್ವತಂತ್ರ ತನಿಖೆಗಿಲ್ಲ ಒಂಬುಡ್ಸ್​ಮನ್: ನಗರ, ಪಟ್ಟಣ-ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನವಿಲ್ಲ

ಬೆಂಗಳೂರು: ನಗರ, ಪಟ್ಟಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ದುರುಪಯೋಗದ ದೂರುಗಳ ಸ್ವತಂತ್ರ ತನಿಖೆಗೆ ಸಾರ್ವಜನಿಕ ತನಿಖಾಧಿಕಾರಿ (ಒಂಬುಡ್ಸ್​ಮನ್) ನೇಮಕವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ತರಲೆಂದು 13ನೇ ಹಣಕಾಸು ಆಯೋಗವು ಸಾರ್ವಜನಿಕ ತನಿಖಾಧಿಕಾರಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು. ಪ್ರಧಾನ ಮಹಾಲೇಖಪಾಲರು (ಲೆಕ್ಕಪರಿಶೋಧನೆ-1) ಸಲ್ಲಿಸಿದ ಪಂಚಾಯತ್​ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿನ 2019ರ ಮಾರ್ಚ್​ನಿಂದ 2020ರ ಮಾರ್ಚ್​ಗೆ ಕೊನೆಗೊಂಡ ವರ್ಷದ ಸಂಯೋಜಿತ ತಾಂತ್ರಿಕ ಪರಿಶೀಲನಾ ವರದಿಯು ಈ ಅಂಶವನ್ನು ಎತ್ತಿ ತೋರಿಸಿದೆ. ವಿಧಾನ ಪರಿಷತ್​ನಲ್ಲಿ ಮುಖ್ಯಮಂತ್ರಿ ಪರವಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಈ ವರದಿ ಮಂಡಿಸಿದರು.

ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಹಾಗೂ ದುರುಪಯೋಗದ ದೂರುಗಳ ಸ್ವತಂತ್ರ ತನಿಖೆಗೆ ಸಾರ್ವಜನಿಕ ತನಿಖಾಧಿಕಾರಿ ನೇಮಕ ಅಗತ್ಯವಿದೆ. ಓಂಬುಡ್ಸ್​ಮನ್ ಅಂತಹ ತನಿಖೆಗಳ ವರದಿ ಲೋಕಾಯುಕ್ತರಿಗೆ ಸಲ್ಲಿಸುವರು. ಲೋಕಾಯುಕ್ತರು ತಮ್ಮ ಶಿಫಾರಸುಗಳೊಂದಿಗೆ ರಾಜ್ಯಪಾಲರಿಗೆ ವರದಿ ಕಳುಹಿಸುವರು. ಶಿಫಾರಸು ಮಾಡಿದ್ದರೂ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಓಂಬುಡ್ಸ್

ಮನ್ ನೇಮಿಸಿಲ್ಲವೆಂದು ವರದಿಯಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. 2020ರ ನವೆಂಬರ್ ಅಂತ್ಯದವರೆಗೆ ಬೆಂಗಳೂರು ನಗರ/ ಗ್ರಾಮೀಣ, ಹಾಸನ/ಕೊಡಗು, ಉಡುಪಿ/ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತಲಾ ಒಬ್ಬರಂತೆ ನೇಮಕವಾಗಿದ್ದು, ಉಳಿದ 5 ಜಿಲ್ಲೆಗಳಲ್ಲಿ ಖಾಲಿಯಿವೆ. ವಸೂಲಿಗೆ ಆದೇಶಿಸಿ 24.12 ಕೋಟಿ ರೂ.ಗಳ ಪೈಕಿ 2.47 ಕೋಟಿ ರೂ ಅನ್ನು ಪಂಚಾಯತ್​ರಾಜ್ ಸಂಸ್ಥೆಗಳು ವಸೂಲಿ ಮಾಡಿದ್ದು, 21.65 ಕೋಟಿ ರೂ. ಬಾಕಿ ಇರುವುದನ್ನು ಪ್ರಧಾನ ಮಹಾಲೇಖಪಾಲರು (ಲೆಕ್ಕಪರಿಶೋಧನೆ-1) ತಮ್ಮ ವರದಿಯಲ್ಲಿ ಅವಲೋಕಿಸಿದ್ದಾರೆ.

ತೆಲಂಗಾಣ ಮಾದರಿಗೆ ಶಿಫಾರಸು: ವಿವಿಧ ಇಲಾಖೆಗಳು ಜಾರಿಗೆ ತಂದಿರುವ ಯೋಜನೆಗಳು ಅಥವಾ ಕಾರ್ಯಕ್ರಮಗಳ ಪರಿಣಾಮಕಾರಿ ಸಾಮಾಜಿಕ ಲೆಕ್ಕಪರಿಶೋಧನೆಗೆ ತೆಲಂಗಾಣ ಮಾದರಿಯಲ್ಲಿ ‘ಸೊಸೈಟಿ ಫಾರ್ ಸೋಷಿಯಲ್ ಆಡಿಟ್, ಅಕೌಂಟಿಬಿಲಿಟಿ ಮತ್ತು ಟ್ರಾನ್ಸ್​ಫರೆನ್ಸಿ’ಯನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ. ತೆಲಂಗಾಣದಲ್ಲಿ ಈ ಕ್ರಮ ಕೈಗೊಂಡಿದ್ದರಿಂದ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾ ವಿಜಿಲೆನ್ಸ್ ಅಧಿಕಾರಿಗೆ ಹಸ್ತಾಂತರ ಹಾಗೂ ದುರುಪಯೋಗದ ಮೊತ್ತದಲ್ಲಿ ಶೇ.30 ವಸೂಲಿ ಸಾಧ್ಯವಾಗಿರುವುದನ್ನು ಉಲ್ಲೇಖಿಸಿದೆ.

ಆದಾಯವಾಗಿ ಪರಿಗಣಿಸಲಿಲ್ಲ: ನಿಯಮದ ಪ್ರಕಾರ, ಠೇವಣಿ, ವಾಪಸ್ ಮಾಡಬೇಕಾದ ಮೊತ್ತಕ್ಕೆ ಸತತ ಮೂರು ಹಣಕಾಸು ವರ್ಷ ಕಳೆದರೂ ಕೋರಿಕೆ (ಕ್ಲೇಮು) ಬರದಿದ್ದಲ್ಲಿ ಅಂತಹ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳ ಆದಾಯವೆಂದು ಪರಿಗಣಿಸಲು ಅವಕಾಶವಿದೆ. ಆದರೆ ಗದಗ-ಬೆಟಗೇರಿ, ಅಳ್ನಾವರ್ ಮತ್ತು ಹೊಳಲ್ಕೆರೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳು ಕ್ಲೇಮು ಆಗದ ಒಟ್ಟು 108.95 ಲಕ್ಷ ರೂ. ಆದಾಯವೆಂದು ಪರಿಗಣಿಸಿಲ್ಲ. ದಾಖಲೆಗಳನ್ನು ಸರಿಯಾದ ರೀತಿ ಪರೀಕ್ಷಿಸಿ, ರದ್ದಾದ ಠೇವಣಿಗಳನ್ನು ಪ್ರಮಾಣೀಕರಿಸಿ ಆದಾಯವೆಂದು ಪರಿಗಣಿಸಿದರೆ ಆದಾಯವೃದ್ಧಿ ಸಾಧ್ಯವಿದೆ ಎಂದು ಪ್ರಧಾನ ಮಹಾಲೇಖಪಾಲರು (ಲೆಕ್ಕ ಪರಿಶೋಧನೆ-1) ವರದಿಯಲ್ಲಿ ಸೂಚಿಸಿದ್ದಾರೆ.

ಜಮೆ ಆಗದ ಮೊತ್ತ: ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳು (ಬಿಬಿಎಂಪಿ ಹೊರತುಪಡಿಸಿ) ಸಂಗ್ರಹಿಸಿದ 378.15 ಕೋಟಿ ರೂ. ಆರೋಗ್ಯ ಉಪಕರ, 60.63 ಕೋಟಿ ರೂ. ಗ್ರಂಥಾಲಯ ಉಪಕರ ಹಾಗೂ 24.18 ಕೋಟಿ ರೂ. ಭಿಕ್ಷಾಟನೆ ಉಪಕರವನ್ನು ಸಂಬಂಧಿಸಿದ ಇಲಾಖೆಗಳು ಅಥವಾ ಲೆಕ್ಕಶೀರ್ಷಿಕೆಗಳಿಗೆ ಜಮೆ ಮಾಡಿರಲಿಲ್ಲ. ಬಿಬಿಎಂಪಿ ಸಂಗ್ರಹಿಸಿದ ಆರೋಗ್ಯ ಉಪಕರ 1,087.28 ಕೋಟಿ ರೂ., ಗ್ರಂಥಾಲಯ ಉಪಕರ 226.73, ಭಿಕ್ಷಾಟನಾ ಉಪಕರ 150.55 ಕೋಟಿ ರೂ. ಸಂಬಂಧಿಸಿದ ಇಲಾಖೆಗಳಿಗೆ ಜಮೆ ಮಾಡಿರಲಿಲ್ಲ ಎಂಬುದನ್ನು ವರದಿ ಗಮನಿಸಿದೆ.

ರಚನೆಯಾಗದ ಮಂಡಳಿ: ರಾಜ್ಯದ ಎಲ್ಲ ಮಹಾನಗರಪಾಲಿಕೆ ಹಾಗೂ ಪುರಸಭೆಗಳಲ್ಲಿ ಆಸ್ತಿ ತೆರಿಗೆ ಮೌಲ್ಯಮಾಪನ ಮಾಡಲು ಸ್ವತಂತ್ರ, ಪಾರದರ್ಶಕ ಕಾರ್ಯವಿಧಾನ ಜಾರಿಗೆ ತರಲು ನೆರವಾಗುವ ರಾಜ್ಯಮಟ್ಟದ ಆಸ್ತಿ ತೆರಿಗೆ ಮಂಡಳಿ 2020ರ ಅಕ್ಟೋಬರ್​ವರೆಗೂ ರಚನೆಯಾಗಿಲ್ಲ. ರಾಜ್ಯ ಸರ್ಕಾರಕ್ಕೆ ಈ ಕುರಿತು 13ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಅಲ್ಲದೆ, ಕಾಯ್ದೆ ಪ್ರಕಾರ ಮಂಡಳಿ ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದರೂ ರಾಜ್ಯ ಆಸ್ತಿ ತೆರಿಗೆ ಮಂಡಳಿ ಸ್ಥಾಪಿಸಿಲ್ಲ ಎಂದು ತಿಳಿಸಿದೆ. ಅದೇ ರೀತಿ, ಸಮುದಾಯ ಪಾಲ್ಗೊಳ್ಳುವಿಕೆ ಉದ್ದೇಶಿತ ವಾರ್ಡ್ ಸಮಿತಿಗಳು ಬಿಬಿಎಂಪಿ ಹೊರತುಪಡಿಸಿ ಬೇರೆ ಯಾವುದೇ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಿಲ್ಲ. ಸ್ವಂತ ಆದಾಯ ಉತ್ಪಾದನಾ ಸಾಮರ್ಥ್ಯವು ಪ್ರೋತ್ಸಾಹದಾಯಕವಾಗಿಲ್ಲ ಎಂದು ಬೊಟ್ಟು ಮಾಡಿದೆ.

ಗ್ರಾಮ ವಿಕಾಸ ಅಕ್ರಮ: ಗ್ರಾಮ ವಿಕಾಸ ಯೋಜನೆಯಡಿ ದಿಡ್ಡಿಗೆ ಗ್ರಾಪಂ ಅನಗತ್ಯ, ಹೆಸರಾಂತ ಸಿಮೆಂಟ್ ಬ್ರಾ್ಯಂಡ್​ಗಳ ಮಾರುಕಟ್ಟೆ ದರಕ್ಕಿಂತ ಎರಡುಪಟ್ಟು ಹೆಚ್ಚಿನ ದರಕ್ಕೆ ಸಿಮೆಂಟ್ ಮೂಟೆ ಖರೀದಿಸಿದ್ದು, 6.64 ಲಕ್ಷ ರೂ. ಪಾವತಿ ಸಂಶಯಾಸ್ಪದವಾಗಿದೆ. ಹಾಗೆಯೇ ಭೌತಿಕ ತಪಾಸಣೆಯಲ್ಲಿ -ಠಿ;74,950 ಮೌಲ್ಯದ 10 ಎಲ್​ಇಡಿ ಬಲ್ಬ್ ಅಳವಡಿಸಿರುವುದು ಕಂಡು ಬಂದಿದ್ದು, ಉಳಿದ 90 ಎಲ್​ಇಡಿ ಬಲ್ಬ್ ಗಳು ಪತ್ತೆ ಮಾಡಲಾಗಿಲ್ಲ. ಇದರ ವೆಚ್ಚ 7.47 ಲಕ್ಷ ರೂ. ಸಂಶಯಾಸ್ಪದವಾಗಿದೆ.

ಬಾಡಿಗೆ ಪರಿಷ್ಕರಣೆ ವಿಫಲ: ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಪ್ರಕಾರ, ಪ್ರತಿ 3 ವರ್ಷಕ್ಕೊಮ್ಮೆ ಮಳಿಗೆ ಬಾಡಿಗೆ ಶೇ.10 ಹೆಚ್ಚಿಸಲು ಅವಕಾಶವಿದೆ. ಆದರೆ ತುಮಕೂರು ಮಹಾನಗರಪಾಲಿಕೆ ಮೂರು ವರ್ಷಗಳ ನಂತರವೂ ಬಾಡಿಗೆ ಪರಿಷ್ಕರಣೆಯಲ್ಲಿ ವಿಫಲವಾಗಿದ್ದು, 38.35 ಲಕ್ಷ ರೂ. ಆದಾಯ ಕಡಿತವಾಗಿದೆ.

ಎನ್​ಡಿಆರ್​ಎಫ್ ಪರಿಷ್ಕರಣೆಗೆ ಆಗ್ರಹ

ಬೆಂಗಳೂರು: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್​ಡಿಆರ್​ಎಫ್) ಹಾಗೂ ಎಸ್​ಡಿಆರ್​ಎಫ್ ಮಾರ್ಗಸೂಚಿ ಪರಿಷ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ ಎಂದು ವಿಧಾನಪರಿಷತ್​ಗೆ ಕಂದಾಯ ಸಚಿವ ಆರ್. ಅಶೋಕ್ ಬುಧವಾರ ತಿಳಿಸಿದರು. ಕಾಂಗ್ರೆಸ್​ನ ಸಲೀಂ ಅಹಮದ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಅಲ್ಲದೆ, ನೇರವಾಗಿ ರ್ಚಚಿಸಿ ಪರಿಹಾರ ಮೊತ್ತ ಮೂರು ಪಟ್ಟು ಹೆಚ್ಚಿಸಲು ಮನವಿ ಮಾಡಿದ್ದಾರೆ ಎಂಬ ಮಾಹಿತಿ ನೀಡಿದರು. ಚಾಲ್ತಿ ಮಾರ್ಗಸೂಚಿ ಪ್ರಕಾರ, ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್​ಗೆ 6,800 ರೂ., ನೀರಾವರಿ ಬೆಳೆಗೆ 13,500 ಹಾಗೂ ಬಹುವಾರ್ಷಿಕ ಬೆಳೆಗೆ ಹೆಕ್ಟೇರ್​ಗೆ 18,000 ರೂ. ದರದಲ್ಲಿ ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್​ಗೆ ಸೀಮಿತಗೊಳಿಸಿ ಪಾವತಿಸಲಾಗುತ್ತಿದೆ ಎಂದರು.

ತ್ವರಿತ ಜಮೆ: ಬೆಳೆ ಹಾನಿಗೆ ಪರಿಹಾರ ವಿತರಣೆ ವ್ಯವಸ್ಥೆ ಚುರುಕುಗೊಳಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಮಾಹಿತಿಯು ಕಂಪ್ಯೂಟರ್​ನಲ್ಲಿ ಅಪ್​ಲೋಡ್ ಆದ ತಿಂಗಳೊಳಗೆ ಪರಿಹಾರ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದ ಆರ್.ಅಶೋಕ್, ಹಿಂದೆಲ್ಲ ಏಳೆಂಟು ತಿಂಗಳ ಕಾಲ ಸಂತ್ರಸ್ತ ರೈತರು ಕಚೇರಿಗೆ ಅಲೆಯುವ ಪರಿಸ್ಥಿತಿ ಇತ್ತು. ತ್ವರಿತ ಜಮೆ ವ್ಯವಸ್ಥೆಯಡಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟದ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಿ, ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಕಳೆದ ವರ್ಷ 12 ಲಕ್ಷ ರೈತರಿಗೆ 941.78 ಕೋಟಿ ರೂ. ಇನ್ಪುಟ್ ಸಬ್ಸಿಡಿ ಜಮೆಯಾಗಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟು, ಪರಿಹಾರ ಮೊತ್ತ ಮೂರು ಪಟ್ಟು ಹೆಚ್ಚಿಸಲು ಕೇಂದ್ರಕ್ಕೆ ಮೊರೆಯಿಟ್ಟಿದೆ ಎಂದು ವಿವರಿಸಿದರು. ಧಾರವಾಡ ಜಿಲ್ಲೆಯ 1,12,411 ರೈತರಿಗೆ 100.44 ಕೋಟಿ ರೂ., ಗದಗ- 1,12,377 ರೈತರಿಗೆ 118.25 ಕೋಟಿ ರೂ., ಹಾವೇರಿ ಜಿಲ್ಲೆಯ 19,928 ರೈತರಿಗೆ 10.71 ಕೋಟಿ ರೂ ಇನ್ಪುಟ್ ಸಬ್ಸಿಡಿ ವಿತರಿಸಲಾಗಿದೆ ಎಂದು ಅಶೋಕ್ ಉತ್ತರಿಸಿದರು.

ಕಾಯ್ದೆ ರೀತ್ಯ ಡ್ರೋನ್ ಸರ್ವೆ: ಡ್ರೋನ್ ಆಧಾರಿತ ಸರ್ವೆಗೆ ತಗುಲುವ ವೆಚ್ಚ 287 ಕೋಟಿ ರೂ.ಗಳಿಗೆ ಅನುಮೋದನೆ ನೀಡಿ, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವ ಹಾಗೂ ಕಾಯ್ದೆ- ಕಟ್ಟಳೆಗಡಿ ವೈಜ್ಞಾನಿಕವಾಗಿ ಭೂಮರುಮಾಪನ ನಡೆಯಲಿದೆ ಎಂದು ಆರ್.ಅಶೋಕ್ ತಿಳಿಸಿದರು. ಜೆಡಿಎಸ್​ನ ಕೆ.ಎ.ತಿಪ್ಪೇಸ್ವಾಮಿ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೇಂದ್ರದ ಭಾರತೀಯ ಸರ್ವೆಕ್ಷಣಾ ಸಂಸ್ಥೆಯು ಸೂಕ್ತ ಸಲಹೆ-ಮಾರ್ಗದರ್ಶನ ನೀಡಲಿದ್ದು, ಈಗಾಗಲೆ ತುಮಕೂರು, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲೆಗಳ 49 ಕೇಂದ್ರಗಳಲ್ಲಿ ಡ್ರೋಣ್ ಆಧಾರಿತ ಭೂಮರು ಮಾಪನ ಕಾರ್ಯ ಪ್ರಗತಿಯಲ್ಲಿದೆ ಎಂದರು.