ಬೆಂಗಳೂರು: ಶಾಲಾ-ಕಾಲೇಜು ಆರಂಭ ವಿಚಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಕೇಂದ್ರ ಸರ್ಕಾರ ಬಿಟ್ಟಿರುವ ಕಾರಣ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಾಲೆ ತೆರೆಯಲು ಸಿದ್ಧತೆ ನಡೆಸಿವೆ. ಈ ಹಿಂದೆಯೇ ಕೇಂದ್ರ, ಸೆ.21ರಿಂದ ಶಾಲೆಗಳಿಗೆ ಮಕ್ಕಳು ಬಂದು ಮಾರ್ಗದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ತಿಳಿಸಿತ್ತು. ಆ ವೇಳೆಗೆ ಶಾಲೆ ತೆರೆಯಲು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸುರಕ್ಷತಾ ಉಪಕರಣ ಮತ್ತು ಉತ್ಪನ್ನಗಳನ್ನು ಖರೀದಿ ಮಾಡಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೂಲಕ ಸೆಪ್ಟಂಬರ್ ಅಂತ್ಯದವರೆಗೆ ಶಾಲೆ ತೆರೆಯುವುದಿಲ್ಲವೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದ್ದು, ಶಾಲೆಗಳು ತೆರೆಯಲಿಲ್ಲ. ಆದರೆ, ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆ ಅಡಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಬೋಧನೆ ಮಾಡುತ್ತಿದ್ದು, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗ ಖಾಸಗಿ ಶಾಲೆಗಳನ್ನು ಆರಂಭಿಸಿ ಶಾಲೆಗಳಲ್ಲೇ ಸುರಕ್ಷತಾ ಕ್ರಮ ಅನುಸರಿಸಿ ತರಗತಿ ನಡೆಸುವುದರಲ್ಲೇನು ತಪ್ಪು ಎಂಬುದು ರಾಜ್ಯದಲ್ಲಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪ್ರಶ್ನೆಯಾಗಿದೆ.