ನ್ಯೂಸ್

ಸಂಸ್ಕೃತ ಕಲಿಯಿರಿ, ಎಷ್ಟೇ ಬೆಳವಣಿಗೆಯಾದರೂ ಸಂಪ್ರದಾಯಗಳನ್ನು ಮರೆಯದಿರಿ: ಭಾರತರತ್ನ ಸರ್ವೇಪಲ್ಲಿ ರಾಧಾಕೃಷ್ಣನ್ ಮೊಮ್ಮಗ ಸಲಹೆ

ಚಿಕ್ಕಬಳ್ಳಾಪುರ: ಭಾರತವು ಇಂದಿನ ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ಪೈಪೋಟಿಯಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ ಎಂದು ಸರ್ವೆಪಲ್ಲಿ ರಾಧಕೃಷ್ಣನ್‌ ಮೊಮ್ಮಗ ಹಾಗೂ ಐಐಎಸ್ಸಿ ವಿಜ್ಞಾನಿ ಗೌತಮ್ ದೇಸಿರಾಜು ‌ಸಂತಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಎಸ್‌ ಜೆಸಿ ತಾಂತ್ರಿಕ ಕಾಲೇಜಿನಲ್ಲಿ  ಕೈಗೊಂಡಿದ್ದ ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 
ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆಯೇ ಕಲಿಕೆಯ ಮೂಲ. ಸರ್ವ ಜ್ಞಾನಕ್ಕೂ ಆಧಾರ. ಹಾಗೆಯೇ
ಒಳ್ಳೆಯ ಸಂಸ್ಕೃತಿ ಮತ್ತು ಪರಂಪರೆಯು ಶಿಕ್ಷಣಕ್ಕಿಂತಲೂ ಉನ್ನತವಾದುದು ಎಂದರು.
ದೇವಭಾಷೆಯಾದ ಸಂಸ್ಕೃತವನ್ನು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಕಲಿಯುವಂತಾಗಬೇಕು. ವಿಜ್ಞಾನ ಎಷ್ಟೇ ಬೆಳವಣಿಗೆಯಾದರೂ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳನ್ನು ಮರೆಯಬಾರದು ಎಂದರು.
ಆದಿಚುಂಚುನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ, ದೇಶಕ್ಕೆ ಅಗತ್ಯವಿರುವ ಆದರ್ಶ ಪ್ರಜೆಗಳನ್ನು ರೂಪಿಸಬೇಕು. ಬದ್ಧತೆ, ಶ್ರದ್ಧೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಎಲ್ಲರಿಗೂ ದಾರಿ ದೀಪವಾಗಬೇಕು ಎಂದರು..
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಡಿಡಿಪಿಐ ರಮೇಶ್‌,  ಬಿಜಿಎಸ್  ಸಮೂಹ ಸಂಸ್ಥೆಗಳ ಮುಖ್ಯ ಆಡಳಿತ ಅಧಿಕಾರಿ ಡಾ. ಎನ್.ಶಿವರಾಮ ರೆಡ್ಡಿ, ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು, ಬಿಜಿಎಸ್‌ ಪಿಯು ಕಾಲೇಜಿನ ಡೀನ್‌ ಡಾ.ಮಧುಸೂದನ್‌, ಅಗಲಗುರ್ಕಿ ಬಿಜಿಎಸ್‌ ಆಂಗ್ಲ ಶಾಲೆಯ ಮುಖ್ಯಶಿಕ್ಷಕ ಡಿ.ಸಿ.ಮೋಹನ್‌ಕುಮಾರ್‌, ಕೆಂಪೇಗೌಡ ಪ್ರತಿಷ್ಠಾನದ ಪದಾಧಿಕಾರಿ ಕೃಷ್ಣಪ್ಪ ಮತ್ತಿತರರು ಇದ್ದರು.

*ತಾತನ ಸ್ಮರಣೆ
ತಾತ ಸರ್ವೆಪಲ್ಲಿ ರಾಧಾಕೃಷ್ಣನ್ ರ ಸರಳ,  ಸಜ್ಜನಿಕೆಯ ವ್ಯಕ್ತಿತ್ವದ ಬಗ್ಗೆ ಗೌತಮ್ ದೇಸಿರಾಜು ಮೆಲುಕು ಹಾಕಿದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳಾಗಿದ್ದಾಗ ನಡೆಸಿದ ಜೀವನ ಹಾಗೂ ಮೈಸೂರಿನಿಂದ ಕೋಲ್ಕತ್ತಾಗೆ ವರ್ಗಾವಣೆಯಾದಾಗ ವಿದ್ಯಾರ್ಥಿಗಳು ತೋರಿದ ಪ್ರೀತಿಯನ್ನು‌, ರಾಧಾಕೃಷ್ಣನ್ ಸ್ಮರಿಸುತ್ತಿದ್ದರು.
ಸಮಾಜಸೇವೆಯಲ್ಲಿ ಅಗಾಧವಾದ ಕೊಡುಗೆಯ ಸಲಹೆ ನೀಡುತ್ತಿದ್ದರು ಎಂದು ತಿಳಿಸಿದರು.