ನ್ಯೂಸ್

ಅಮೆರಿಕದಿಂದ ಎಷ್ಟೇ ಒತ್ತಡ ಬಂದರೂ ರೈತರಿಗೆ ಹಾನಿ ಮಾಡಲು ಬಿಡುವುದಿಲ್ಲ: ಪ್ರಧಾನಿ ಮೋದಿ| PM Modi

PM Modi: ಅಮೆರಿಕದಿಂದ ಎಷ್ಟೇ ಒತ್ತಡ ಬಂದರೂ ನಮ್ಮ ಸರ್ಕಾರ ಸಣ್ಣ ಉದ್ಯಮಿಗಳು, ರೈತರು ಮತ್ತು ಪಶುಪಾಲಕರಿಗೆ ಯಾವುದೇ ಹಾನಿಯಾಗಲು ಎಂದಿಗೂ ಬಿಡುವುದಿಲ್ಲ ಎಂದು ಪ್ರಧಾನಿ ಮಂತ್ರಿ ನರೇಂದ್ರ ಸೋಮವಾರ (ಆಗಸ್ಟ್​,25) ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮೋದಿ, ಜಗತ್ತಿನಲ್ಲಿ, ಎಲ್ಲರೂ ಆರ್ಥಿಕ ಹಿತಾಸಕ್ತಿಗಳನ್ನು ಆಧರಿಸಿದ ರಾಜಕೀಯದಲ್ಲಿ ನಿರತರಾಗಿದ್ದಾರೆ. ನಾನು ನನ್ನ ಸಣ್ಣ ಉದ್ಯಮಿಗಳು, ನನ್ನ ಸಣ್ಣ ಅಂಗಡಿಯವರ ಸಹೋದರ ಸಹೋದರಿಯರು, ನನ್ನ ರೈತರು, ನನ್ನ ಪಶುಸಂಗೋಪನಾ ಸಹೋದರ ಸಹೋದರಿಯರನ್ನು ಕಾಪಡುತ್ತೇನೆ. ಅಲ್ಲದೆ, ನಾನು ಗಾಂಧಿಯವರ ಭೂಮಿಯಲ್ಲಿ ಇದನ್ನು ಹೇಳುತ್ತಿದ್ದೇನೆ. ಅದು ನನ್ನ ದೇಶದ ಸಣ್ಣ ಉದ್ಯಮಿಗಳು, ರೈತರು, ಪ್ರಾಣಿ ಪಾಲಕರಾಗಿರಲಿ, ಎಲ್ಲರಿಗೂ, ನಾನು ನಿಮಗೆ ಮತ್ತೆ ಭರವಸೆ ನೀಡುತ್ತೇನೆ, ನಿಮ್ಮ ಹಿತಾಸಕ್ತಿಗಳು ಮೋದಿಗೆ ಅತ್ಯುನ್ನತವಾಗಿವೆ ಎಂದು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಮೋದಿ, ನನ್ನ ಸರ್ಕಾರವು ಸಣ್ಣ ಉದ್ಯಮಿಗಳು, ರೈತರು ಮತ್ತು ಪ್ರಾಣಿ ಪಾಲಕರಿಗೆ ಯಾವುದೇ ಹಾನಿಯಾಗಲು ಎಂದಿಗೂ ಬಿಡುವುದಿಲ್ಲ. ಎಷ್ಟೇ ಒತ್ತಡ ಬಂದರೂ, ನಾವು ತಡೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೇವೆ. ಇಂದು ಆತ್ಮನಿರ್ಭರ ಭಾರತ ಅಭಿಯಾನವು ಗುಜರಾತ್‌ನಿಂದ ಸಾಕಷ್ಟು ಶಕ್ತಿಯನ್ನು ಪಡೆಯುತ್ತಿದೆ ಮತ್ತು ಇದರ ಹಿಂದೆ ಎರಡು ದಶಕಗಳ ಕಠಿಣ ಪರಿಶ್ರಮವಿದೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ ನಮ್ಮ ಸೇನೆಯ ಶೌರ್ಯದ ಸಂಕೇತ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ ನಮ್ಮ ಸೇನೆಯ ಶೌರ್ಯ ಸಂಕೇತವಾಗಿದೆ ಎಂದು ಹೇಳಿದರು.

ನಮ್ಮ ಪೂಜ್ಯ ಬಾಪು ಅವರು ಸ್ವದೇಶಿ ಮೂಲಕ ಭಾರತದ ಸಮೃದ್ಧಿಯ ಹಾದಿಯನ್ನು ತೋರಿಸಿದ್ದರು. ಇಲ್ಲಿ ನಮಗೆ ಸಬರಮತಿ ಆಶ್ರಮವಿದೆ. ಗಾಂಧಿಜೀ ಹೆಸರಿನಲ್ಲಿ ದಶಕಗಳ ಕಾಲ ಅಧಿಕಾರ ಅನುಭವಿಸಿದ ಪಕ್ಷವು ಬಾಪು ಅವರ ಆತ್ಮವನ್ನು ಪುಡಿ ಮಾಡಿತು ಎಂಬುದಕ್ಕೆ ಈ ಆಶ್ರಮ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.(ಏಜೆನ್ಸೀಸ್)