ನ್ಯೂಸ್

ಜೀವವನ್ನೇ ಅಪಾಯಕ್ಕೊಡ್ಡಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ; ಕನಿಷ್ಠ ರಕ್ಷಣಾ ಸಾಧನವೂ ಇಲ್ಲ..!

ಶಿಮ್ಲಾ: ಕರೊನಾ ವೈರಸ್‌ನ ಈ ಸಮಯದಲ್ಲಿ ಅನೇಕ ವೈದ್ಯಕೀಯ ಸಿಬ್ಬಂದಿ ತಮ್ಮ ಪ್ರಾಣ ಒತ್ತೆ ಇಟ್ಟು, ಹಗಲು ಇರುಳು ಎನ್ನದೇ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಹಲವು ಕಡೆಗಳಲ್ಲಿ ಇಂಥ ವೈದ್ಯರಿಗೇ ಸೂಕ್ತ ರಕ್ಷಣೆ ಇಲ್ಲದಂಥ ನೋವಿನ ಸಂಗತಿ ಕೇಳಿಬರುತ್ತಿದೆ.

ಹಿಮಾಚಲ ಪ್ರದೇಶದ ಶಿಮ್ಲಾದ ರಾಂಪುರದಲ್ಲಿನ ಮಹಾತ್ಮಾಗಾಂಧಿ ಮೆಡಿಕಲ್‌ ಸರ್ವೀಸ್‌ ಕಾಂಪ್ಲೆಕ್ಸ್‌ ಆಸ್ಪತ್ರೆಯಲ್ಲಿ ವೈದ್ಯರು ಯಾವುದೇ ರೀತಿಯ ಸೂಕ್ತ ರಕ್ಷಣಾ ಸಾಧನಗಳು ಇಲ್ಲದೇ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ! ಅವರಿಗೆ ರಕ್ಷಣಾ ಸಾಧನವಾದ ಮಾಸ್ಕ್‌, ಕೈಗವಸು ಸೇರಿದಂತೆ ಯಾವುದೇ ರೀತಿಯ ಕನಿಷ್ಠ ಸೌಲಭ್ಯಗಳನ್ನೂ ನೀಡಿಲ್ಲ ಎಂದು ವರದಿಯಾಗಿದೆ.

ಇಲ್ಲಿಯ ವೈದ್ಯಕೀಯ ಸಿಬ್ಬಂದಿಯ ಸಮಸ್ಯೆ ಇಲ್ಲಿಗೇ ಮುಗಿಯುವುದಿಲ್ಲ. ಹಣದ ಕೊರತೆಯಿದೆ ಎಂದು ಹೇಳಿರುವ ಸರ್ಕಾರ, ಸಾರಿಗೆ ಸೌಲಭ್ಯಕ್ಕಾಗಿ ಭದ್ರತಾ ಸಿಬ್ಬಂದಿ, ದಾದಿಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಶುಲ್ಕ ಪಡೆಯುತ್ತಿದೆ!

"ನಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್‌, ಕೈಗವಸುಗಳು ಯಾವುದೂ ಇಲ್ಲ. ಸದ್ಯ ಒಂದೇ ಜೊತೆಯ ಮಾಸ್ಕ್‌ ಮತ್ತು ಕೈಗವಸು ಇದ್ದು, ಎಲ್ಲರೂ ಇದನ್ನೇ ಬಳಸುವ ಪರಿಸ್ಥಿತಿ ಬಂದಿದೆ. ಸುರಕ್ಷತೆಯ ದೃಷ್ಟಿಯಿಂದ, ಮಾಸ್ಕ್‌ ಮತ್ತು ಕೈಗಸನ್ನು ಪದೇ ಪದೇ ಬದಲಾಯಿಸಬೇಕು. ಒಬ್ಬರೇ ಇದನ್ನು ಬಳಸುವಾಗಲೂ ಬದಲಾಯಿಸುವುದು ಅನಿವಾರ್ಯ. ಆದರೆ ನಾವು ಮಾತ್ರ ಎಲ್ಲರೂ ಇದೊಂದೇ ಜೊತೆಯನ್ನು ಕಳೆದ ಒಂದು ತಿಂಗಳಿನಿಂದ ಬಳಸುತ್ತಿದ್ದೇವೆ. ಇದನ್ನು ಬಿಟ್ಟರೆ ಬೇರಾವ ರಕ್ಷಣಾ ಸಾಧನಗಳನ್ನೂ ನಮಗೆ ನೀಡಿಲ್ಲ’ ಎಂದು ಅಲ್ಲಿಯ ವೈದ್ಯಕೀಯ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಇದು ಒಂದೆಡೆಯಾದರೆ, ಪ್ರಯಾಣದ ಸಮಸ್ಯೆಯನ್ನೂ ನಾವು ಎದುರಿಸುತ್ತಿದ್ದೇವೆ. ನಮಗಾಗಿ ಕ್ಯಾಬ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ತಿಂಗಳು ನಮ್ಮಿಂದಲೇ 450 ರೂ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ದಿನವೂ ಜೀವ ಭಯದ ಜತೆಯಲ್ಲಿ ಹಣಕಾಸಿನ ಮುಗ್ಗಟ್ಟನ್ನೂ ಎದುರಿಸುವ ಪರಿಸ್ಥಿತಿ ಇದೆ. ಮುಂದೇನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ವೈದ್ಯಕೀಯ ಸಿಬ್ಬಂದಿಗೆ ಎಲ್ಲ ರೀತಿಯ ರಕ್ಷಣಾ ಸಾಧನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.  ಹಿಮಾಚಲ ಪ್ರದೇಶದಲ್ಲಿ 25 ಮಂದಿ ಸೋಂಕಿತರು ಪತ್ತೆಯಾಗಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.(ಏಜೆನ್ಸೀಸ್​)