ಬೆಂಗಳೂರು: ಕರೊನಾ ನಿಯಂತ್ರಿಸುವ ಸಲುವಾಗಿ ಘೋಷಿಸಲಾಗಿರುವ ದಿಗ್ಬಂಧನವನ್ನು ಏ. 15ರಂದು ಏಕಾಏಕಿ ತೆರವುಗೊಳಿಸದೆ, ಸೋಂಕಿಲ್ಲದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ನಿರ್ಬಂಧ ಸಡಿಲಿಸುವಂತೆ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಕರೊನಾ ಹಾಟ್ಸ್ಟಾಟ್ ಜಿಲ್ಲೆಗಳೆಂದು ಐದು ಜಿಲ್ಲೆಗಳನ್ನು ಗುರುತಿಸಿದ್ದು, ಅಲ್ಲಿ ಏಪ್ರಿಲ್ ಕೊನೆಯ ತನಕ ಯಥಾಸ್ಥಿತಿ ಮುಂದುವರಿಸುವಂತೆಯೂ ಸಮಿತಿ ಸೂಚಿಸಿದೆ.
ರಾಷ್ಟ್ರವ್ಯಾಪಿ ಘೊಷಣೆಯಾದ ಲಾಕ್ ಡೌನ್ ನಿಗದಿಯಂತೆ ಏ.14 ಕ್ಕೆ ಮುಕ್ತಾಯಗೊಳ್ಳಬೇಕು. ಆದರೆ, ಕರೊನಾ ಸೋಂಕು ದಿನೇದಿನೆ ವಿಸ್ತರಿಸುತ್ತಿರುವುದರಿಂದ ಲಾಕ್ಡೌನ್ ಕೊನೆಗೊಳಿಸುವ ಬಗ್ಗೆಯೇ ಸರ್ಕಾರದ ಮಟ್ಟದಲ್ಲಿ ಅಭಿಪ್ರಾಯ ಭೇದಗಳಿವೆ.
ಲಾಕ್ಡೌನ್ ಮುಂದುವರಿಸುವ ವಿಚಾರ ಈಗ ಸರ್ಕಾರ ರಚಿಸಿರುವ ಆರೋಗ್ಯ ತಜ್ಞರ ಸಮಿತಿಯ ಮುಂದಿದೆ. ಈ ಸಮಿತಿ ಲಾಕ್ಡೌನ್ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಅಧ್ಯಯನ ನಡೆಸಿದ್ದು, ಬುಧವಾರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ. ವೈದ್ಯರಾದ ಡಾ. ಸಿ.ಎನ್. ಮಂಜುನಾಥ್, ಡಾ. ದೇವಿಶೆಟ್ಟಿ ಅವರನ್ನೊಳಗೊಂಡ ಐದು ಜನ ತಜ್ಞ ವೈದ್ಯರು ಸಮಿತಿಯಲ್ಲಿದ್ದಾರೆ.
- ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಐಟಿ/ಬಿಟಿ ಕಂಪನಿಗಳು ಮತ್ತು ಎಂಎನ್ಸಿಎಸ್ಗೆ ನಿರ್ದೇಶನ ನೀಡಬೇಕು
- ಹಾಟ್ಸ್ಪಾಟ್ಗಳಲ್ಲದ ಕೋವಿಡ್ -19 ಪ್ರಕರಣಗಳು ವರದಿಯಾಗದ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆದುಹಾಕಬಹುದು
- ಹಾಟ್ಸ್ಪಾಟ್ ಹಾಗೂ ನಾನ್ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ರಾಜ್ಯ, ಅಂತಾರಾಜ್ಯ ಸಮೂಹ ಸಾರಿಗೆ ಬಸ್ ಓಡಾಟಕ್ಕೆ ನಿರ್ಬಂಧ ಮುಂದುವರಿಕೆ
- ರೈಲು ಸಂಚಾರ ಕೂಡ ಕನಿಷ್ಠ ಏ.30 ರವರೆಗೆ ನಿರ್ಬಂಧ
- ಇಂಟರ್ ನ್ಯಾಷನಲ್ ಮತ್ತು ಡೊಮೆಸ್ಟಿಕ್ ವಿಮಾನ ಪ್ರಯಾಣ ನಿರ್ಬಂಧ ಮುಂದುವರಿಕೆ ಸೂಕ್ತ
- ಲಾಕ್ ಡೌನ್ ಸಂಪೂರ್ಣ ತೆಗೆದರೂ ಈಗಿರುವ ಮುನ್ನೆಚ್ಚರಿಕಾ ಕ್ರಮ ಮುಂದುವರಿಯಬೇಕು
- ಗಾರ್ವೆಂಟ್ಸ್ ಫ್ಯಾಕ್ಟರಿ ಸೇರಿದಂತೆ ಎಲ್ಲ ಕೈಗಾರಿಕೆಗಳು ಶೇ.50 ಕಾರ್ವಿುಕರನ್ನು ಬಳಸಿಕೊಂಡು ವಾರದ ರೊಟೇಷನ್ ಆಧಾರದಲ್ಲಿ ನಡೆಸಬಹುದು. ಅವರಿಗೆ ಸಲ್ಲಬೇಕಾದ ವೇತನ ಮತ್ತಿತರೆ ಸವಲತ್ತುಗಳಲ್ಲಿ ಯಾವುದೇ ಕಡಿತ ಮಾಡಬಾರದು. ಸಾಮಾಜಿಕ ಅಂತರ ಕಾಪಾಡಬೇಕು
- ಸೂಪರ್ ಮಾರ್ಕೆಟ್ಗಳಲ್ಲಿ ಈಗಿರುವ ನಿಯಮಗಳನ್ನೇ ಇನ್ನು ಕೆಲ ಕಾಲ ಮುಂದುವರಿಸಬೇಕು
- ಸಾರ್ವಜನಿಕರು ಇನ್ನು ಎರಡು ವಾರ ಕಾಲ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
- ಕ್ವಾರಂಟೈನ್ ನಲ್ಲಿ ಇರುವವರ ಮೇಲೆ ನಿರಂತರ ನಿಗಾ ಹಾಗೂ ಚಿಕಿತ್ಸೆ ಮುಂದುವರಿಸಬೇಕು
- ್ಞಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು, ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್, ಮಾಸ್ಕ್ ಮತ್ತಿತರ ಅವಶ್ಯ ಸಾಮಗ್ರಿ ಪೂರೈಸಬೇಕು
- ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರ ವಾಸ್ತವ್ಯಕ್ಕೆ ಹೋಟೆಲ್ ವ್ಯವಸ್ಥೆ ಕಲ್ಪಿಸಬೇಕು.