ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸುವ ಯೋಚನೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಾರಾಂತ್ಯದ ಕರ್ಪ್ಯೂ ಕೂಡ ಯಾವುದೇ ಕಾರಣಕ್ಕೂ ಜಾರಿ ಮಾಡುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವುದು ಬೇಡ ಎಂದು ಹೇಳಿದರು.
ಜೂನ್ 16 ಮತ್ತು 17ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಅದರಲ್ಲಿಯೂ ತಮ್ಮ ಈ ನಿಲುವನ್ನು ಸ್ಪಷ್ಟಪಡಿಸುವುದಾಗಿ ಹೇಳಿದ ಸಿಎಂ, ಅದರ ಜತೆಗೆ ಮತ್ತಷ್ಟು ಚಟುವಟಿಕೆಗಳಿಗೆ ನಿರ್ಬಂಧದಿಂದ ವಿನಾಯಿತಿ ಕೋರಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: VIDEO: ಹುಡುಗಿಯರನ್ನು ಕೂರಿಸಿಕೊಂಡು ಅಡ್ಡಾದಿಡ್ಡಿ ಲ್ಯಾಂಬೋರ್ಗಿನಿ ಕಾರ್ ಚಲಾಯಿಸಿದವನಿಗೆ ಜನರಿಂದ ಗೂಸಾ!
ಬರುವ ಗುರುವಾರ ರಾಜ್ಯದಲ್ಲಿ ಮಾಸ್ಕ್ ಡೇ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಎಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು ಉಲ್ಲಂಘಿಸಿದರೆ 200 ರೂ. ದಂಡ ಹಾಕಲಾಗುತ್ತದೆ. ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಮಾಸ್ಕ್ ಡೇ ಆಚರಿಸಲಾಗುತ್ತಿದೆ ಎಂದರು.