ನ್ಯೂಸ್

ಅಮೆರಿಕಾದಲ್ಲಿ ಟ್ರಂಪ್ ವಿರುದ್ಧ ಬೃಹತ್ ನೋ ಕಿಂಗ್ಸ್​ ಪ್ರತಿಭಟನೆ: ವ್ಯಂಗ್ಯವಾಗಿ ಕಿಂಗ್ ಶೈಲಿಯ ಎಐ ವಿಡಿಯೋ ಹರಿಬಿಟ್ಟ ಟ್ರಂಪ್| Donald Trump

America: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ನೇತೃತ್ವದ ಸರ್ಕಾರವು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರತ್ವದತ್ತ ವೇಗವಾಗಿ ಚಲಿಸುತ್ತಿದೆ ಎಂದು ಆರೋಪಿಸಿ ಶನಿವಾರ(ಅ. 18) ಅಮೆರಿಕಾ ಅನೇಕ ದೊಡ್ಡ ದೊಡ್ಡ ನಗರಗಳಲ್ಲಿ ಸಾವಿರಾರು ಜನ ನೋ ಕಿಂಗ್ಸ್​ ಪ್ರತಿಭಟನೆಯ ರ‍್ಯಾಲಿ ನಡೆಸಿದ್ದಾರೆ.

‘ಪ್ರತಿಭಟಿಸುವುದಕ್ಕಿಂತ ದೇಶಭಕ್ತಿ ಇನ್ನೊಂದಿಲ್ಲ’, ‘ಫ್ಯಾಸಿಸಂ ಅನ್ನು ವಿರೋಧಿಸಿ’ ಎಂಬ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹೊತ್ತ ಸಾವಿರಾರು ಜನ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ರ‍್ಯಾಲಿ ನಡೆಸಿದರು. ಜೊತೆಗೆ ಬೋಸ್ಟನ್, ಅಟ್ಲಾಂಟಾ ಹಾಗೂ ಚಿಕಾಗೋದ ಉದ್ಯಾನವನಗಳಲ್ಲಿ ಸಾವಿರಾರು ಜನರೊಂದಿಗೆ ಅದೇ ರೀತಿಯಾಗಿ ಪ್ರತಿಭಟಿಸಿದ್ದಾರೆ.

ಮೆರವಣಿಗೆ ಬ್ಯಾಂಡ್‌ಗಳು, ಜನರು ಸಹಿ ಮಾಡಬಹುದಾದ US ಸಂವಿಧಾನದ "ನಾವು ಜನರು" ಎಂಬ ಪೀಠಿಕೆಯೊಂದಿಗೆ ಬೃಹತ್ ಬ್ಯಾನರ್‌ಗಳು ಮತ್ತು ಗಾಳಿ ತುಂಬಬಹುದಾದ ವೇಷಭೂಷಣಗಳನ್ನು ಧರಿಸಿದ ಪ್ರತಿಭಟನಾಕಾರರು, ವಿಶೇಷವಾಗಿ ಕಪ್ಪೆಗಳು, ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿರೋಧದ ಸಂಕೇತಗಳು ಕಂಡು ಬಂದಿವೆ. ಇನ್ನೂ ಟ್ರಂಪ ಅವರ ರಿಪಬ್ಲಿಕನ್​ ಪಕ್ಷವೂ ಈ ಪ್ರತಿಭಟನೆಯನ್ನೂ ಹೇಟ್ ಅಮೆರಿಕನ್ ರ‍್ಯಾಲಿಗಳು ಎಂದು ಕರೆದಿದೆ.

ನೋ ಕಿಂಗ್ಸ್​ ರ‍್ಯಾಲಿಗಳಿಗೆ ಎಐ ವಿಡಿಯೋದಿಂದ ಟಾಂಗ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರಳಿ ಅಧಿಕಾರಕ್ಕೆ ಬಂದ ನಂತರ ನಡೆದ ಮೂರನೇ ಬೃಹತ್ ಪ್ರತಿಭಟನೆ ಇದಾಗಿದೆ. ನೋ ಕಿಂಗ್ಸ್​ ಪ್ರತಿಭಟನೆಗೆ ತಿರುಗೇಟು ಕೊಟ್ಟಿರುವ ಟ್ರಂಪ್, ಎಐ ವಿಡಿಯೋ ಒಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಎಐ ವಿಡಿಯೋದಲ್ಲಿ ಟ್ರಂಪ್ ಕಿಂಗ್​ ರೀತಿಯಲ್ಲಿ ಕಿರೀಟ ಮತ್ತು ವೇಶ ಧರಿಸಿ ವಿಮಾನವೊಂದರಲ್ಲಿ ಕುಳಿತು ಪ್ರತಿಭಟಿಸುವವರ ಮೇಲೆ ಬಾಂಬ್ ಹಾಕುವ ರೀತಿಯಲ್ಲಿ ಕಕ್ಕಸು ಚೆಲ್ಲುವ ವಿಡಿಯೋವನ್ನು ಹರಿಬಿಡುವ ಮೂಲಕ ತಮ್ಮ ವಿರುದ್ಧದ ಪ್ರತಿಭಟನೆಗೆ ಟಾಂಗ್ ಕೊಟ್ಟಿದ್ದಾರೆ. (ಏಜೆನ್ಸೀಸ್)