ನವದೆಹಲಿ: ಪ್ರತಿನಿತ್ಯ ಹಲವಾರು ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಕಾಲಕಾಲಕ್ಕೆ ಸಂಚಾರ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಅತಿವೇಗದಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಾರೆ. ಜನರು ಹೆಲ್ಮೆಟ್ ಧರಿಸಿ ಎಂದು ಹೇಳುವ ಟ್ರಾಫಿಕ್ ಸಿಗ್ನಲ್‌ನ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ರಸ್ತೆಯಲ್ಲಿ ನಿಂತಿರುವ ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಇರುವವರೆಗೂ ಟ್ರಾಫಿಕ್ ಲೈಟ್ ಕೆಂಪಾಗಿಯೇ ಇರುತ್ತದೆ ಎಂಬುದು ಇದರ ವಿಶೇಷ. ಸಿಗ್ನಲ್‌ನಲ್ಲಿ ದೊಡ್ಡ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದ್ದು, ಅದರಲ್ಲಿ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ಮುಖವನ್ನು ಕೇಂದ್ರೀಕರಿಸಿ ಸಿಗ್ನಲ್ ಹಸಿರು ಇಲ್ಲದಿರುವುದು ಅವರಿಂದಲೇ ಎಂದು ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಬೈಕ್ ಓಡಿಸುವ ಹುಡುಗಿ ಪರದೆಯತ್ತ ನೋಡಿದ ತಕ್ಷಣ ನಾಚಿಕೆಯಿಂದ ಹೆಲ್ಮೆಟ್ ಧರಿಸುವುದನ್ನು ನೀವು ನೋಡಬಹುದು.
ಹೆಲ್ಮೆಟ್ ಇಲ್ಲ, ಗ್ರೀನ್ ಸಿಗ್ನಲ್ ಇಲ್ಲ ಎಂಬ ಶೀರ್ಷಿಕೆ ನೀಡಿ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಅಪ್‌ಲೋಡ್ ಮಾಡಿದ ವಿಡಿಯೋವನ್ನು ಇಲ್ಲಿಯವರೆಗೆ 82 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 24 ಸಾವಿರಕ್ಕೂ ಹೆಚ್ಚು ರೀಟ್ವೀಟ್‌ಗಳು ಮತ್ತು ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ.
ಕೆಲವರು ಇದನ್ನು ಸ್ಪೇನ್ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಅರ್ಜೆಂಟೀನಾ ಎಂದು ಕರೆಯುತ್ತಿದ್ದಾರೆ. ಎಂತಹ ಅದ್ಭುತ ತಂತ್ರಜ್ಞಾನ. ಇದು ವಿಶೇಷವಾಗಿ ಭಾರತದಲ್ಲಿ ಖಂಡಿತಾ ಆಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ.