| ಅವಿನಾಶ ಮೂಡಂಬಿಕಾನ ಬೆಂಗಳೂರು
ಭಾರತೀಯ ಕಾನೂನುಗಳು ಹಿರಿಯ ನಾಗರೀಕರ ಪರವಾಗಿದ್ದರೂ ಅವರ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ದೇಶಾದ್ಯಂತ ಕಳೆದ ಮೂರು ವರ್ಷಗಳಲ್ಲಿ 73,977 ಕೇಸ್ಗಳು ಠಾಣೆ ಮೆಟ್ಟಿಲೇರಿವೆ ಎಂಬ ಸ್ಪೋಟಕ ಸಂಗತಿ ರಾಷ್ಟ್ರೀಯ ಅಪರಾಧ ದಾಖಲೆಗಳ (ಎನ್ಸಿಆರ್ಬಿ) ಮೂಲಕ ಬೆಳಕಿಗೆ ಬಂದಿದೆ.
ಭಾರತದಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿರುವುದು ಭಾರತದ ಶಕ್ತಿ. ಅದೇ ರೀತಿ ವೃದ್ಧರ ಸಂಖ್ಯೆಯೂ ಭಾರತದಲ್ಲಿ ಹೆಚ್ಚುತ್ತಿದೆ ಎಂಬುದು ಅಷ್ಟೇ ಸತ್ಯ. ಆರೋಗ್ಯ ಹಾಗೂ ಸಾಮಾಜಿಕ ಭದ್ರತೆ ವಿಚಾರದಲ್ಲಿ ಬಹುತೇಕ ವೃದ್ಧರು ವೃದ್ಧಾಪ್ಯ ಸೌಲಭ್ಯ ಹೊಂದಿಲ್ಲ. ಇದೆಲ್ಲದರ ನಡುವೆ ಹಿರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚುತ್ತಿವೆ. ಆರ್ಥಿಕ ಅವಲಂಬನೆ ಹಾಗೂ ಹೊಂದಾಣಿಕೆ ಕೊರತೆಯೇ ದೌರ್ಜನ್ಯಗಳಿಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಶೇ.5 ವೃದ್ಧರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.
2019ರಲ್ಲೇ ಅತೀ ಹೆಚ್ಚು ಪ್ರಕರಣ: ಹಿರಿಯ ನಾಗರಿಕರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 2018ರಲ್ಲಿ 23,498 ಪ್ರಕರಣ ದಾಖಲಾದರೆ, 2019-26,669 ಹಾಗೂ 2020ರಲ್ಲಿ 23,810 ಪ್ರಕರಣಗಳು ಠಾಣೆ ಮೆಟ್ಟಿಲೇರಿವೆ. ಕರ್ನಾಟಕದಲ್ಲಿ 2018ರಲ್ಲಿ 1038, 2019-1,172, 2020-853ರಲ್ಲಿ ಕೇಸ್ ದಾಖಲಾಗಿದ್ದು, ದೇಶದಲ್ಲೇ 8 ಸ್ಥಾನದಲ್ಲಿದೆ. 2020ರಲ್ಲಿ ಮಹಾರಾಷ್ಟ್ರದಲ್ಲಿ 4,909 ಕೇಸ್ ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಮಧ್ಯಪ್ರದೇಶ-4,602, ಗುಜರಾತ್- 2,785, ತಮಿಳುನಾಡು- 1,581, ತೆಲಂಗಾಣ- 1,575, ಆಂಧ್ರ ಪ್ರದೇಶ-1,860, ಚತ್ತೀಸ್ಗಢ-1,533 ಕೇಸ್ ಠಾಣೆ ಮೆಟ್ಟಿಲೇರಿದೆ.
ಒಂದೇ ವರ್ಷದಲ್ಲಿ 1,144 ವೃದ್ಧರ ಹತ್ಯೆ: ವಿವಿಧ ಕಾರಣಗಳಿಗೆ 2020 ಒಂದೇ ವರ್ಷದಲ್ಲಿ ಭಾರತದಲ್ಲಿ 1,144 ವೃದ್ಧರ ಹತ್ಯೆ ನಡೆದಿದ್ದು, ಈ ಪೈಕಿ 64 ಪ್ರಕರಣ ಕರ್ನಾಟಕದಲ್ಲಿ ದಾಖಲಾಗಿದೆ. 2018-954, 2019ರಲ್ಲಿ 1,143 ಹತ್ಯೆ ಪ್ರಕರಣ ನಡೆದಿದೆ. ದೇಶದಲ್ಲಿ ಹಿರಿಯ ನಾಗರಿಕರ ವಿರುದ್ಧ ನಡೆಯುತ್ತಿರುವ ಅಪರಾಧ ಪ್ರಕರಣಗಳ ಪೈಕಿ ವಂಚನೆ ಕೇಸ್ಗಳೇ ಅಧಿಕವಾಗಿವೆ. ಹಿರಿಯರಿಗೆ ವಿವಿಧ ಆಮೀಷಗಳನ್ನು ಒಡ್ಡಿ ವಂಚಿಸುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 2018ರಲ್ಲಿ 1,688 (ಕ-168), 2019-2,178(ಕ-165), 2020ರಲ್ಲಿ 1,949 (ಕ-106) ಕೇಸ್ಗಳು ದಾಖಲಾಗಿರುವುದು ಎನ್ಸಿಆರ್ಬಿ ಬಿಡುಗಡೆ ಮಾಡಿರುವ ದಾಖಲೆಯಿಂದ ಗೊತ್ತಾಗಿದೆ.
ಪರ ಇರುವ ಕಾಯ್ದೆಗಳಾವುವು?: ಹಿರಿಯ ನಾಗರಿಕರ ನೆರವಿಗೆ ಹಲವು ಕಾಯ್ದೆಗಳು ಬಂದಿದ್ದರೂ ಸರಿಯಾದ ಮಾಹಿತಿ ಹಾಗೂ ಪ್ರಚಾರದ ಕೊರತೆಯಿಂದ ಬಳಕೆಯಾಗುತ್ತಿಲ್ಲ. ಹಿರಿಯ ನಾಗರಿಕರು ಮತ್ತು ಪಾಲಕರ ರಕ್ಷಣಾ ಕಾಯ್ದೆ-2007ರಲ್ಲಿ ಜಾರಿಗೆ ಬಂದಿತ್ತು. ಇದರ ಪ್ರಕಾರ ಪಾಲಕರಿಗೆ ಮಕ್ಕಳು ಕನಿಷ್ಠ 10 ಸಾವಿರ ರೂ. ಜೀವನಾಂಶ ಕೊಡಬೇಕಿದ್ದು, ಇಲ್ಲದಿದ್ದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶಗಳಿವೆ. ಆದರೆ, ಹಿರಿಯ ನಾಗರೀಕರ ವಿರುದ್ಧದ ದೌರ್ಜನ್ಯ ತಡೆಗಟ್ಟಲು ಬಲಿಷ್ಠ ಕಾಯ್ದೆಗಳು ಜಾರಿಗೆ ಬಂದಿಲ್ಲ. ಬಹಳಷ್ಟು ವೃದ್ಧರು ಏಕಾಂಗಿಯಾಗಿ ಜೀವಿಸುತ್ತಿರುವುದು ಸಮಾಜದಲ್ಲಿ ಕಾಣುತ್ತೇವೆ. ವೃದ್ಧರಿಗೆ ಜೀವನ ನಡೆಸಲು ಸೂಕ್ತ ಭದ್ರತೆ ಹಾಗೂ ಅವರಿಗೆ ಜೀವನ ನಡೆಸಲು ನೆರವಾಗುವ ನಿಟ್ಟಿನಲ್ಲಿ ಆದಾಯ ಕಲ್ಪಿಸುವ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲ. ಇದರಿಂದಾಗಿ ದೇಶದಲ್ಲಿ ಒಂಟಿಯಾಗಿ ಜೀವಿಸುತ್ತಿರುವ ಸಾವಿರಾರು ವೃದ್ಧರು ಹೈರಾಣಾಗಿದ್ದಾರೆ.
ಮಗ, ಸೊಸೆಯಿಂದಲೇ ದೌರ್ಜನ್ಯ ಹೆಚ್ಚು: ಮಗ, ಸೊಸೆಯಿಂದಲೇ ಹೆಚ್ಚಾಗಿ ಹಿರಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಕಂಡು ಬರುತ್ತಿವೆ. ಇನ್ನು ಮನೆಯವರು ಸದಾ ತಮ್ಮ ಕಾರ್ಯಗಳಲ್ಲಿ ಬಿಜಿ ಇರುವುದರಿಂದ ಮನೆಯಲ್ಲಿರುವ ಹಿರಿಯರ ಆರೋಗ್ಯ, ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಬೆಂಗಳೂರಿನಲ್ಲೂ ಇಂತಹ ಕೇಸ್ಗಳು ಹೆಚ್ಚುತ್ತಿವೆ. ಇದರಿಂದ ವೃದ್ಧರು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ ಎಂಬುದು ಕೆಲ ಸಮೀಕ್ಷೆಗಳಿಂದ ತಿಳಿದು ಬಂದಿದೆ.