ನ್ಯೂಸ್

ಶಾಲೆ ಶುರುವಾಗುವವರೆಗೂ ಶುಲ್ಕ ವಸೂಲಿ ಬೇಡ: ಹೀಗೆ ಹೇಳಿದ ರಾಜ್ಯ ಯಾವುದು ಗೊತ್ತೆ?

suchetana

ಅಹಮದಾಬಾದ್: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಲವಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ, ಇನ್ನು ಹಲವರಿಗೆ ಸಂಬಳ ಸಿಗುತ್ತಿಲ್ಲ, ಮತ್ತೆ ಕೆಲವರಿಗೆ ಸಂಬಳ ಕಡಿತವಾಗಿದೆ. ಇವೆಲ್ಲವುಗಳಿಂದ ಶಾಲಾ-ಕಾಲೇಜುಗಳ ಫೀಸ್‌ ತುಂಬುವುದು ಹಲವು ಪಾಲಕರಿಗೆ ಕಷ್ಟವಾಗುತ್ತಿದೆ.

ಆದರೆ ಅದೇ ಇನ್ನೊಂದೆಡೆ, ಶಾಲಾ-ಕಾಲೇಜುಗಳು ಕೂಡ ತಮ್ಮ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸಂಬಳ ಕೊಡಬೇಕಾಗಿರುವ ಹಿನ್ನೆಲೆಯಲ್ಲಿ ಶುಲ್ಕವನ್ನು ನೀಡುವಂತೆ ತಾಕೀತು ಮಾಡುತ್ತಿವೆ. ಶಾಲಾ-ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ ಭರಿಸುವಂತೆ ಪೋಷಕರಿಗೆ ಒತ್ತಡ ಹೇರಲಾಗುತ್ತಿದೆ.

ಶಾಲೆಗಳ ಈ ಕ್ರಮ ಸರಿಯಲ್ಲ ಎಂದಿರುವ ಗುಜರಾತ್‌ ಸರ್ಕಾರ, ಶಾಲೆಗಳು ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಬೋಧನಾ ಶುಲ್ಕವನ್ನು ವಿಧಿಸಬಾರದು ಎಂದು ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದೇ ವೇಳೆ 2020-21ನೇ ಸಾಲಿನ ಶಾಲೆಯ ಶುಲ್ಕವನ್ನು ಕೂಡ ಹೆಚ್ಚಳ ಮಾಡುವಂತಿಲ್ಲ ಎಂದು ಸೂಚಿಸಿದೆ.

1 ರಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳ ಪಾಲಕರು ಶುಲ್ಕ ನೀಡದೇ ಹೋದರೆ ಅಂಥವರನ್ನು ದಾಖಲಾತಿಯಿಂದ ಕೈಬಿಡುವಂತಿಲ್ಲ, ಇದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಸರ್ಕಾರ ಹೇಳಿದೆ.

ಗುಜರಾತ್‌ ಹೈಕೋರ್ಟ್‌ ಈ ಹಿಂದೆ ಜೂನ್ 30 ರವರೆಗೆ ಶುಲ್ಕವನ್ನು ಪಾವತಿಸದ ಯಾವುದೇ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವಂತಿಲ್ಲ ಎಂದು ಹೇಳಿತ್ತು. ಅದನ್ನು ಕೂಡ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಆನ್‌ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ ಎಂಬ ವಾದಕ್ಕೆ ಸರ್ಕಾರ, ಇದು ನಿಜವಾದ ಶಿಕ್ಷಣವಲ್ಲ, ಹೈಕೋರ್ಟ್‌ ಆದೇಶದ ಅನ್ವಯ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದಿದೆ. ಅದೇ ವೇಳೆ ಈಗಾಗಲೇ ಹಲವಾರು ಪಾಲಕರು ಫೀಸ್‌ ಕೊಟ್ಟಿದ್ದಾರೆ. ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಯ ಸಂಬಳಕ್ಕೆ ಅದನ್ನು ಅಡ್ಜೆಸ್ಟ್‌ ಮಾಡಿ, ಆದರೆ ಯಾವುದೇ ಕಾರಣಕ್ಕೂ ಪಾಲಕರ ಮೇಲೆ ಒತ್ತಡ ಹೇರುವಂತಿಲ್ಲ ಎಂದಿದೆ. (ಏಜೆನ್ಸೀಸ್‌)