ನ್ಯೂಸ್

ಬಿಎಂಟಿಸಿಯ ರಾತ್ರಿ ಸೇವೆ ಬಸ್‌ಗಳಲ್ಲಿ ಅಧಿಕ ದರ ವಸೂಲಿಗೆ ಬ್ರೇಕ್

ಆರ್.ತುಳಸಿಕುಮಾರ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಾರ್ಯಾಚರಿಸುತ್ತಿರುವ ರಾತ್ರಿ ಸೇವೆ ಬಸ್‌ಗಳಲ್ಲಿ ಹೆಚ್ಚುವರಿ ಟಿಕೆಟ್ ದರ ವಸೂಲಿಗೆ ಬ್ರೇಕ್ ಬಿದ್ದಿದೆ.

ಹೆಚ್ಚುವರಿ ಹಣ ವಸೂಲಿ ವಿರುದ್ಧ ಸಾರ್ವಜನಿಕರು ಆಕ್ಷೇಪಿಸಿದ ಬೆನ್ನಲ್ಲೇ ಬಿಎಂಟಿಸಿ ತನ್ನ ನಿರ್ಧಾರವನ್ನು ಬದಲಿಸಿದ್ದು, ಬುಧವಾರದಿಂದಲೇ ಏಕರೂಪದ ಪ್ರಯಾಣ ದರವನ್ನು ಮಾತ್ರ ವಸೂಲಿ ಮಾಡುವಂತೆ ತನ್ನೆಲ್ಲ ಹಿರಿಯ ಅಧಿಕಾರಿಗಳು, ಬಸ್ ಡಿಪೋ ವ್ಯವಸ್ಥಾಪಕರು, ನಿಯಂತ್ರಣ ಕೊಠಡಿಯ ಮೇಲ್ವಿಚಾರಕರಿಗೆ ಸುತ್ತೋಲೆ ಪ್ರತಿಯನ್ನು ಕಳುಹಿಸಿಕೊಟ್ಟಿದೆ.

ಮೆಜೆಸ್ಟಿಕ್ ಸಹಿತ ನಗರ ಪ್ರಮುಖ ನಿಲ್ದಾಣಗಳಿಂದ ತೆರಳುವ ಬಸ್‌ಗಳಲ್ಲಿ ರಾತ್ರಿ 11 ಗಂಟೆ ಬಳಿಕ ‘ರಾತ್ರಿ ಸೇವೆ’ ಹೆಸರಿನಲ್ಲಿ ಪ್ರಯಾಣಿಕರು ಶೇ.50 ದರ ಹೆಚ್ಚಿಗೆ ಪಾವತಿಸಬೇಕಿತ್ತು. ಈ ಪದ್ಧತಿ ಹಲವು ವರ್ಷಗಳಿಂದ ಇದ್ದು, ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ರಾತ್ರಿ ಸೇವೆ ಬಸ್‌ಗಳನ್ನು ಓಡಿಸುತ್ತಿದ್ದ ಕಾರಣ ಅಧಿಕ ಹಣ ತೆರಬೇಕಾಗಿತ್ತು. ಬಿಎಂಟಿಸಿ ಸೇವಾ ಸಂಸ್ಥೆ ಆಗಿರುವ ಕಾರಣ ಹೆಚ್ಚುವರಿ ದರ ಪಡೆಯಬಾರದು ಎಂಬುದಾಗಿ ಪ್ರಯಾಣಿಕರು ಒತ್ತಾಯಿಸುತ್ತಲೇ ಬರುತ್ತಿದ್ದರು.

ಇದನ್ನಾಧರಿಸಿ 2020ರ ಮೇ 25ರ ಆದೇಶದಲ್ಲಿ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ಆದೇಶದನ್ವಯ ಹಲವು ಮಾರ್ಗಗಳಲ್ಲಿ ಹೆಚ್ಚುವರಿ ದರವನ್ನೇ ಈವರೆಗೂ ವಸೂಲು ಮಾಡಲಾಗುತ್ತಿತ್ತು. ಇದೀಗ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿ ಸೂಚನೆ ಪಾಲಿಸುವಂತೆ ತಾಕೀತು ಮಾಡಿದ್ದಾರೆ.