ನ್ಯೂಸ್

ಮೊದಲ ಮತ್ತು ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಇಲ್ಲ ಪರೀಕ್ಷೆ

ನವದೆಹಲಿ: ದೇಶಾದ್ಯಂತ ಇರುವ 45 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲ ಮತ್ತು ದ್ವಿತೀಯ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಪರೀಕ್ಷೆಗಳು ಇರುವುದಿಲ್ಲ. ಆದರೆ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುತ್ತದೆ ಎಂದು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್​ ಮೂಲಕ ಎಲ್ಲ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಪ್ರಾಧ್ಯಾಪಕರು ಮತ್ತು ಪ್ರೊಫೆಸರ್​ಗಳ ಜತೆ ಗುರುವಾರ ನೇರ ಸಂವಾದ ನಡೆಸಿದರು. ಅಂತಿಮ ವರ್ಷದ ಪದವಿ ತರಗತಿಗಳ ಪರೀಕ್ಷೆಗಳು ಜುಲೈನಲ್ಲಿ ನಿಗದಿಯಾಗಿವೆ. ಒಂದು ವೇಳೆ ಕೋವಿಡ್​-19 ಪರಿಸ್ಥಿತಿ ಸುಧಾರಿಸದಿದ್ದರೆ ಪರೀಕ್ಷೆಗಳು ಮುಂದೂಡಿಕೆಯಾಗಬಹುದು. ಆದರೆ, ಜುಲೈನಲ್ಲಿ ಅಲ್ಲದಿದ್ದರೂ ಬೇರಾವುದೇ ತಿಂಗಳಲ್ಲಿ ಅಂತಿಮ ವರ್ಷದ ಪದವಿ ತರಗತಿಗಳ ಪರೀಕ್ಷೆ ನಡೆಯುವುದು ನಿಶ್ಚಿತ ಎಂದು ಹೇಳಿದರು.

ಮೊದಲ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಮೊದಲ ಸೆಮಿಸ್ಟರ್​ನಲ್ಲಿನ ಸಾಧನೆ ಹಾಗೂ ಹಿಂದಿನ ಶೈಕ್ಷಣಿಕ ದಾಖಲೆಗಳನ್ನು ಆಧರಿಸಿ 2ನೇ ವರ್ಷಕ್ಕೆ ಪ್ರಮೋಷನ್​ ನೀಡಲಾಗುವುದು. ಶೇ.50 ಇಂಟರ್​ನಲ್​ ಮಾರ್ಕ್ಸ್​​ ಮತ್ತು ಕಳೆದ ವರ್ಷ ಇಲ್ಲವೇ ಸೆಮಿಸ್ಟರ್​ನ ಶೈಕ್ಷಣಿಕ ಸಾಧನೆಯ ಶೇ.50 ಅಂಕಗಳನ್ನು ಆಧರಿಸಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪದವಿಗೆ ಪ್ರಮೋಷನ್​ ನೀಡಲಾಗುವುದು ಎಂದು ವಿವರಿಸಿದರು.

ಅದೇನೇ ಆದರೂ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಎಂದು ಪುನರುಚ್ಚರಿಸಿದರು. ಇನ್ನೂ ಅನುಮಾನಗಳಿದ್ದರೆ ಅವುಗಳನ್ನು ಪರಿಹರಿಸಿಕೊಳ್ಳಲು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಕಾರ್ಯಪಡೆಯನ್ನು ಸಂಪರ್ಕಿಸುವಂತೆ ಸೂಚಿಸಿದರು.