ನ್ಯೂಸ್

'ಪುಷ್ಪ 2' ಎಫೆಕ್ಟ್​! ಇನ್ಮುಂದೆ ಈ ರಾಜ್ಯದ ಚಿತ್ರಮಂದಿರಗಳಲ್ಲಿ ಮಕ್ಕಳಿಗಿಲ್ಲ ಎಂಟ್ರಿ, | No Entry

No Entry To Theatres: ಇಂದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಕುತೂಹಲ ಹೆಚ್ಚಾಗಿಯೇ ಇದೆ. ಕಿರುಚಾಟ ಮತ್ತು ಕೂಗಾಟದ ನಡುವೆಯೇ ದೊಡ್ಡ ಪರದೆಯ ಮೇಲೆ ತಮ್ಮ ನೆಚ್ಚಿನ ಸ್ಟಾರ್​ ನಟರ ಸಿನಿಮಾ ನೋಡುವುದು ವಿಭಿನ್ನ ಅನುಭವ. ಈ ಆಸೆಯಿಂದ ಅನೇಕ ಜನರು ಇಂದಿಗೂ ಫಸ್ಟ್​ ಡೇ ಫಸ್ಟ್ ಶೋ ನೋಡುವ ಉತ್ಸಾಹ ತೋರುತ್ತಾರೆ. ಇದೇ ಕಾರಣಕ್ಕೆ ನೂಕುನುಗ್ಗಲಿನ ನಡುವೆಯೇ ಟಿಕೆಟ್​ ಖರೀದಿಗೆ ಮುಗಿಬೀಳುತ್ತಾರೆ.

ಮೊದಲ ದಿನ ತಮ್ಮ ನೆಚ್ಚಿನ ನಾಯಕ ಮತ್ತು ಸಿನಿಮಾವನ್ನು ನೋಡಲು ಆಸಕ್ತಿ ತೋರುವ ಪೋಷಕರು, ತಮ್ಮೊಂದಿಗೆ ತಮ್ಮ ಮಕ್ಕಳನ್ನು ಮೊದಲ ದಿನದ ಮೊದಲ ಶೋಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ನೂಕುನುಗ್ಗಲು, ಕಾಲ್ತುಳಿತ ಪ್ರಕರಣಗಳು ಉಂಟಾಗಿ ಮಕ್ಕಳು ಸಾವಿಗೀಡಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸಂಧ್ಯಾ ಥಿಯೇಟರ್​ನಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ ಹಾಗೂ ಎಲ್ಲಾ ಸಮಯದಲ್ಲಿಯೂ ಅಪ್ರಾಪ್ತ ವಯಸ್ಕರನ್ನು ಚಿತ್ರಮಂದಿರಗಳಿಗೆ ಬಿಡುವುದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡ ತೆಲಂಗಾಣ ಹೈಕೋರ್ಟ್ ಪ್ರಮುಖ ತೀರ್ಪುವೊಂದನ್ನು ನೀಡಿದೆ.

ಮುಂಬರುವ ದಿನಗಳಲ್ಲಿ ಮೊದಲ ಹಾಗೂ ಕಡೆಯ ಶೋ ಸಿನಿಮಾಗಳಿಗೆ ಮಕ್ಕಳಿಗೆ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗುವುದು ಹಾಗೂ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ತೆಲಂಗಾಣ ಹೈಕೋರ್ಟ್ ತಿಳಿಸಿದೆ. ಅರ್ಜಿದಾರರ ಪರ ವಕೀಲರ ವಾದಗಳೊಂದಿಗೆ ಸಮ್ಮತಿಸಿದ ಹೈಕೋರ್ಟ್, ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. 16 ವರ್ಷದೊಳಗಿನ ಮಕ್ಕಳನ್ನು ಚಿತ್ರಮಂದಿರಗಳಿಗೆ ಮೇಲ್ವಿಚಾರಣೆಯಿಲ್ಲದೆ ಪ್ರವೇಶಿಸುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

16 ವರ್ಷದೊಳಗಿನ ಮಕ್ಕಳನ್ನು ಬೆಳಗ್ಗೆ 11 ಗಂಟೆಯ ಮೊದಲು ಮತ್ತು ರಾತ್ರಿ 11 ಗಂಟೆಯ ನಂತರ ಯಾವ ಸಿನಿಮಾಗಳ ವೀಕ್ಷಣೆಗೂ ಚಿತ್ರಮಂದಿರದಲ್ಲಿ ಅವಕಾಶ ಕೊಡಬೇಡಿ. ಈ ವಯಸ್ಸಿನ ಮಕ್ಕಳಿಗೆ ಪ್ರವೇಶ ಅನುಮತಿಸಬಾರದು. ರಾಜ್ಯ ಸರ್ಕಾರ ಈ ವಿಷಯದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿ, ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 22ಕ್ಕೆ ಮುಂದೂಡಿದೆ,(ಏಜೆನ್ಸೀಸ್).