ಉಡುಪಿ: ಭಾರತದ ಪಾಲಿಗೆ 2021 ಗ್ರಹಣಗಳಿಲ್ಲದ ವರ್ಷ. ಮುಂದಿನ ವರ್ಷದಲ್ಲಿ ನಾಲ್ಕು ಗ್ರಹಣಗಳು ಸಂಭವಿಸುತ್ತವೆಯಾದರೂ, ಭಾರತೀಯರಿಗೆ ಇವು ಗೋಚರಿಸುವುದಿಲ್ಲ.
ಮೇ 26ಕ್ಕೆ ಖಗ್ರಾಸ ಚಂದ್ರಗ್ರಹಣ, ನ.19ಕ್ಕೆ ಪಾರ್ಶ್ವ ಚಂದ್ರಗ್ರಹಣ, ಜೂ.10ಕ್ಕೆ ಕಂಕಣ ಸೂರ್ಯಗ್ರಹಣ ಹಾಗೂ ಡಿ.4ಕ್ಕೆ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತವೆ. ಇನ್ನೊಂದು ವಿಶೇಷವೆಂದರೆ, ಈ ವರ್ಷ ನಾಲ್ಕು ಸೂಪರ್ವುೂನ್ಗಳಿವೆ. ಮಾ.28, ಏಪ್ರಿಲ್ 27, ಮೇ 26, ಹಾಗೂ ಜೂನ್ 24ರ ಹುಣ್ಣಿಮೆ ದಿನ ಚಂದ್ರ ಸುಮಾರು 25 ಅಂಶ ದೊಡ್ಡದಾಗಿ ಕಾಣಲಿದ್ದಾನೆ ಎಂದು ಭೌತಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ. ಎ.ಪಿ ಭಟ್ ತಿಳಿಸಿದ್ದಾರೆ. ಪ್ರತೀ ವರ್ಷ ಸಂಭವಿಸುವ 15 ಉಲ್ಕಾಪಾತಗಳಲ್ಲಿ ಈ ವರ್ಷ ಕೆಲವೇ ಉಲ್ಕಾಪಾತಗಳಿವೆ. ಜ.4ರ ಕ್ವಾಡ್ರಂಟಿಡ್ ಉಲ್ಕಾಪಾತ, ಆ.12ರ ಪರ್ಸಿಡ್ ಉಲ್ಕಾಪಾತ, ಡಿ.14ರ ಜಿಮಿನಿಡ್ ಉಲ್ಕಾಪಾತ. ಇದರೊಂದಿಗೆ ಆ 2ರಂದು ಶನಿಗ್ರಹ ಹಾಗೂ ಆ.20ರಂದು ಗುರುಗ್ರಹ ರಾತ್ರಿ ಪೂರ್ತಿ ಕಾಣ ಸಿಗಲಿದೆ.
ಏಪ್ರಿಲ್ 27ರಂದು ಮಂಗಳನನ್ನೇ ಚಂದ್ರ ಮರೆಮಾಚುವ ಕೌತುಕ ನಭೋಮಂಡಲದಲ್ಲಿ ನಡೆಯಲಿದೆ. ಫೆಬ್ರವರಿ ಮೊದಲ ವಾರದ ವರೆಗೆ ಬೆಳಗಿನ ಜಾವ ಕಾಣುವ ಶುಕ್ರ ನಂತರ, ಏಪ್ರಿಲ್ 21ರಿಂದ ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ಗೋಚರಿಸಲಿದೆ. ವರ್ಷದಲ್ಲಿ ಹೆಚ್ಚೆಂದರೆ ಆರು ಬಾರಿ ಒಂದು ವಾರ ಕಾಣುವ ಬುಧ ಗ್ರಹ ಈ ವರ್ಷ ಜನವರಿ 24, ಮೇ 17, ಸೆ.14ರಂದು ಸಂಜೆ ಸೂರ್ಯಾಸ್ತವಾದ ಕೆಲ ನಿಮಿಷ ಪಶ್ಚಿಮ ಆಕಾಶದಲ್ಲಿ ಕಾಣಸಿಗಲಿದ್ದಾನೆ. ಮಾ.6, ಜುಲೈ 4, ಹಾಗೂ ಅ. 25ರಂದು ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಬಹುದು ಎಂದು ಅವರು ವಿವರಿಸಿದ್ದಾರೆ.