ನ್ಯೂಸ್

ವಿಜಯಶಂಕರ್ ಆತ್ಮಹತ್ಯೆ ಪ್ರಕರಣದಲ್ಲಿ ಯಾರ ಮೇಲೂ ಅನುಮಾನ ಇಲ್ಲ; ಅಸಹಜ ಸಾವು ಪ್ರಕರಣ ದಾಖಲು

rameshmysuru

ಬೆಂಗಳೂರು: ಐಎಎಸ್ ಅಧಿಕಾರಿ ವಿಜಯಶಂಕರ್ ಸಾವಿನ ಸಂಬಂಧ ಅವರ ಹಿರಿಯ ಪುತ್ರಿ ನೀಡಿದ ದೂರಿನ ಮೇರೆಗೆ ತಿಲಕನಗರ ಪೊಲೀಸರು ‘ಅಸಹಜ ಸಾವು’ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಂದೆ ಸಾವಿನ ಕುರಿತು ಯಾರ ಮೇಲೂ ಅನುಮಾನಗಳಿಲ್ಲ. ಎಂದಿನಂತೆ ಮಂಗಳವಾರ ಸಂಜೆ 6ಗಂಟೆಗೆ ಕಚೇರಿಯಿಂದ ತಂದೆ ಮನೆಗೆ ಮರಳಿದರು. ಆಗ ನಡುಮನೆಯಲ್ಲಿ ಅಮ್ಮ ಇದ್ದರು. 7 ಗಂಟೆಗೆ ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ. ಘಟನೆಯಿಂದ ಸಾಕಷ್ಟು ಆಘಾತವಾಗಿದೆ ಎಂದು ವಿಜಯ ಶಂಕರ್ ಪುತ್ರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯಶಂಕರ್ ಮೃತದೇಹವನ್ನು ಕರೊನಾ ತಪಾಸಣೆಗೆ ಒಳಪಡಿಸಲಾಯಿತು. ನೆಗೆಟಿವ್ ವರದಿ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಹಸ್ತಾಂತರಿಸ ಲಾಯಿತು. ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಬೆಂಬಿಡದೆ ಕಾಡಿದ ಐಎಂಎ : ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್, ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಸುಳಿಗೆ ಸಿಲುಕಿ ವಿವಾದದಿಂದ ಹೊರ ಬರಲಾಗದೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಸ್​ಐಟಿ ತನಿಖೆ ಬಳಿಕ ಸಿಬಿಐ ತನಿಖೆ ಉರುಳು ಸುತ್ತಿಕೊಂಡಿತ್ತು. ಸಿಬಿಐಗೆ ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡದಂತೆ ಮನವಿ ಸಹ ಮಾಡಿದ್ದರು. ಅದಕ್ಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಪೂರಕ ಸ್ಪಂದನೆ ಸಿಗದ ಕಾರಣಕ್ಕೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪೊಲೀಸರು ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಿದ್ದು, ವರದಿ ಬಂದ ನಂತರವಷ್ಟೇ ನಿಖರ ಕಾರಣ ಲಭ್ಯವಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಾವಿನ ಸುಳಿವು ಕೊಟ್ಟಿದ್ದರಾ?: ಮೂಲತಃ ಬೆಂಗಳೂರಿನ ವಿಜಯಶಂಕರ್​ಗೆ ಇಬ್ಬರು ಪುತ್ರಿಯರು. ಒಬ್ಬರಿಗೆ ಮದುವೆಯಾಗಿದ್ದು, 2ನೇ ಮಗಳ ವಿವಾಹವನ್ನು ಅದ್ದೂರಿಯಾಗಿ ಮಾಡಬೇಕೆಂಬ ಕನಸು ಕಂಡಿದ್ದರು. ಇತ್ತೀಚೆಗೆ ತನ್ನ ಪತ್ನಿಗೆ ‘ನಾನು ಇಲ್ಲದಿದ್ದರೂ ಮಗಳನ್ನು ಚೆನ್ನಾಗಿ ನೋಡಿಕೊ’ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ.

ಕೊನೆ ದಿನವೂ ಅಧಿಕಾರಿಗಳ ಜತೆ ಸಭೆ: ಲಂಚ ಪಡೆದ ಆರೋಪದ ಮೇಲೆ ಅಮಾನತುಗೊಂಡಿದ್ದ ವಿಜಯ ಶಂಕರ್​ಗೆ 20 ದಿನಗಳ ಹಿಂದಷ್ಟೇ ಸಕಾಲ ಇಲಾಖೆಯಲ್ಲಿ ಹುದ್ದೆ ನೀಡಲಾಗಿತ್ತು. ಮಂಗಳವಾರ ಎಂದಿನಂತೆ ಕಚೇರಿಗೆ ತೆರಳಿದ ಅವರು ಅಧಿಕಾರಿಗಳ ಜತೆ ಸಾಲು ಸಾಲು ಸಭೆ ನಡೆಸಿದ್ದರು. ಎಲ್ಲರೊಂದಿಗೆ ಲವಲವಿಕೆಯಿಂದ ಮಾತನಾಡಿಕೊಂಡು ಇದ್ದರು. ಮಧ್ಯಾಹ್ನ 12 ಗಂಟೆಗೆ ಕಚೇರಿಯಿಂದ ಹೊರಟು ಸಂಜೆ ಮನೆಗೆ ಬಂದಿದ್ದರು.

ಐಎಎಸ್​ಗೆ ಬುದ್ಧಿಮಾತು ರಾಜಕಾರಣಿಗೆ ಚಾಟಿ: ರಾಜಕೀಯ ಮುಖಂಡರು ದಪ್ಪ ಚರ್ಮದವರು. ನಿಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ. ಎಲ್ಲ ಪಾಪ ಮತ್ತು ತಪ್ಪುಗಳಿಗೆ ನೀವು ಮಾತ್ರ ಉತ್ತರ ನೀಡಬೇಕು. ಕಾನೂನು ಮತ್ತು ನಿಯಮಗಳ ವಿರುದ್ಧ ಕೆಲಸ ಮಾಡಬೇಡಿ ಎಂದು ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಐಎಎಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ವಿಜಯಶಂಕರ್ ಆತ್ಮಹತ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಬಿದರಿ, ಬಹಿರಂಗ ಪತ್ರ ಬರೆದಿದ್ದಾರೆ. ರಾಜಕೀಯ ಮುಖಂಡರಿಗೆ ಲಂಚ ಕೊಟ್ಟು ಹುದ್ದೆಗೆ ಬರಬೇಡಿ. ಅವರನ್ನು ಮೆಚ್ಚಿಸುವ ಸಲುವಾಗಿ ನಿಯಮ ಮೀರಿ ಕೆಲಸ ಮಾಡಬೇಡಿ. ಶೇ.75 ರಾಜಕಾರಣಿಗಳು ನೈತಿಕವಾಗಿ ದಿವಾಳಿಯಾಗಿದ್ದಾರೆ. ಮಧ್ಯಮ ಕುಟುಂಬದಿಂದ ಬಂದು ವಿದ್ಯಾವಂತರಾಗಿ ಉನ್ನತ ಹುದ್ದೆಗೆ ಏರುತ್ತೀರಿ. ಪೊಲೀಸ್ ಕೇಸ್ ಮತ್ತು ಬಂಧನಕ್ಕೆ ಒಳಗಾದಾಗ ಸಹಿಸಿಕೊಳ್ಳುವ ಶಕ್ತಿ ನಮಗಿಲ್ಲ. ಪ್ರತಿ ಕೆಲಸವನ್ನೂ ಎಚ್ಚರದಿಂದ ನಿರ್ವಹಿಸಿ ಎಂದಿದ್ದಾರೆ.