ಬೆಂಗಳೂರು: ಕರೊನಾ ಸೋಂಕು ನಿರ್ವಹಣೆಗೆ ಆರೋಗ್ಯ ಸಂರಕ್ಷಣಾ ಉಪಕರಣಗಳ ಖರೀದಿಯಲ್ಲಿ ಯಾವುದೇ ತಪ್ಪಾಗಿಲ್ಲ. ಹೀಗಾಗಿ ತನಿಖೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವ ಬಿ. ಶ್ರೀರಾಮುಲು ಬಲವಾಗಿ ಸಮರ್ಥಿಸಿಕೊಂಡರು. ಸೋಂಕು ನಿಯಂತ್ರಣ ಜತೆಗೆ ಆರೋಗ್ಯ ಸವಲತ್ತುಗಳ ಸುಧಾರಣೆಗೂ ಸರ್ಕಾರ ಹೆಚ್ಚಿನ ಪ್ರಾಶಸ್ಱ ನೀಡಿದೆ. ಹಿಟ್ ಆಂಡ್ ರನ್ ಘಟನೆಯಾಗಬಾರದು, ಸದನದಲ್ಲಿ ಪ್ರತಿಯೊಂದಕ್ಕೂ ದಾಖಲೆಗಳ ಸಹಿತ ಲೆಕ್ಕ ಕೊಡುತ್ತೇವೆ, ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಿದ್ದೇವೆಂದು ‘ಲೆಕ್ಕ ಕೊಡಿ ಮುಖ್ಯಮಂತ್ರಿಗಳೇ’ ಎಂಬ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ತ.ನಾಡಿನದು ಸಂಚಾರಿ ವೆಂಟಿಲೇಟರ್: ‘ತಮಿಳುನಾಡಿನಲ್ಲಿ 4 ಲಕ್ಷ ರೂ.ಗೆ ವೆಂಟಿಲೇಟರ್ ಖರೀದಿಸುತ್ತಾರೆ. ನಮ್ಮಲ್ಲಿ ಮಾತ್ರ 18 ಲಕ್ಷ ರೂ. ಹಾಗೂ 5.60 ಲಕ್ಷ ರೂ.ಗೆ ಖರೀದಿಸುತ್ತಿರುವುದೇಕೆ’ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ, ತಮಿಳುನಾಡಿನದು ಮೊಬೈಲ್ ವೆಂಟಿಲೇಟರ್, ಆಂಬುಲೆನ್ಸ್ ಗಳಲ್ಲಿ ಬಳಸುತ್ತಾರೆ ಎಂದು ಸಮಜಾಯಿಷಿ ನೀಡಿದರು.
ರಾಜ್ಯದಲ್ಲಿ ಹೆಚ್ಚಿನ ವಿಶೇಷತೆಯಿರುವ ಐಸಿಯುನಲ್ಲಿ ಬಳಕೆಗೆ 1 ವೆಂಟಿಲೇಟರ್ 18 ಲಕ್ಷ ರೂ.ಗೆ ಖರೀದಿಸಿದ್ದು, ಮಿಕ್ಕವು ವಿಶೇಷತೆಯುಳ್ಳ ವೆಂಟಿಲೇಟರ್ಗಳಾಗಿವೆ. ತಾಂತ್ರಿಕ ತಜ್ಞರ ಸಲಹೆ ಪಡೆದೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಂದಹಾಗೆ, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಿವಾನಂದ ಪಾಟೀಲ್ ಆರೋಗ್ಯ ಸಚಿವರಾಗಿ ದ್ದರು. ಆ ವೇಳೆ ತಲಾ 15.12 ಲಕ್ಷ ರೂ.ನಂತೆ 3 ಬಾರಿ ವೆಂಟಿಲೇಟರ್ ಖರೀದಿಸಲಾಗಿದ್ದು, ಅಂದು ಪರಿಸ್ಥಿತಿ ಏನಿತ್ತು? ಎಂದು ಕಾಂಗ್ರೆಸ್ ನಾಯಕರಿಗೆ ಡಿಸಿಎಂ ಮರು ಪ್ರಶ್ನಿಸಿದರು.
ರಾಮುಲು ಅಂಕಿ-ಅಂಶ: ಅತ್ಯಧಿಕ ವಿಶೇಷತೆಯುಳ್ಳ 1 ವೆಂಟಿಲೇಟರ್ಗೆ 18.20 ಲಕ್ಷ ರೂ. ಸೇರಿ 108 ವೆಂಟಿಲೇಟರ್ಗೆ 10.61 ಕೋಟಿ ರೂ., 9.65 ಲಕ್ಷ ಪಿಪಿಇ ಕಿಟ್ಗಳಿಗೆ 79.35 ಕೋಟಿ ರೂ., 30 ಸಾವಿರ ಸರ್ಜಿಕಲ್ ಗ್ಲೌಸ್ಗೆ 28.50 ಲಕ್ಷ ರೂ., ಎನ್-95 ಮಾಸ್ಕ್ ಗೆ 11.51 ಕೋಟಿ ರೂ., ಹ್ಯಾಂಡ್ ಸ್ಯಾನಿಟೈಸರ್ಗೆ 2.65 ಕೋಟಿ ರೂ. ಪಾವತಿಸಲಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಮಾಹಿತಿ ನೀಡಿದರು.
ಜಿಲ್ಲೆಗಳಿಂದ ಮಾಹಿತಿ ಕೇಳಿದ ಸರ್ಕಾರ: ಬೆಂಗಳೂರು: ಕರೊನಾ ಉಪಕರಣಗಳ ಖರೀದಿ ಕುರಿತಂತೆ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳಿಂದ ಸರ್ಕಾರ ಸಂಪೂರ್ಣ ಮಾಹಿತಿ ಕೋರಿದೆ. ಚಿಕಿತ್ಸೆಗೆ ಬೇಕಾದ ಕೆಲವು ಅಗತ್ಯ ವಸ್ತುಗಳನ್ನು ಜಿಲ್ಲೆಗಳಲ್ಲಿಯೇ ಖರೀದಿ ಮಾಡಲು ಸರ್ಕಾರ ಹೇಳಿತ್ತು. ಆ ಹಿನ್ನೆಲೆಯಲ್ಲಿ ಖರೀದಿ ಮಾಡಿರುವ ವಸ್ತಗಳ ಹಾಗೂ ವೆಚ್ಚದ ವಿವರಗಳನ್ನು ಕೂಡಲೇ ನೀಡುವಂತೆ ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಖರೀದಿ ಪ್ರಕ್ರಿಯೆ ಇಲಾಖೆಯ ಡ್ರಗ್ಸ್ ಲಾಜಿಸ್ಟಿಕ್ಸ್ ಆಂಡ್ ವೇರ್ ಹೌಸಿಂಗ್ ಸೊಸೈಟಿ ಮೂಲಕವೇ ನಡೆದಿದೆ. ವಿವಿಧ ಪರಿಕರಗಳಿಗೆ ಮಾರ್ಚ್ನಿಂದ ಈವರೆಗೆ 290 ಕೋಟಿ ರೂ. ವೆಚ್ಚವಾಗಿದೆ. | ಜಾವೇದ್ ಅಖ್ತರ್ ಅಪರ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಪಿಎಂ ಕೇರ್ಸ್ನಲ್ಲಿ ಕೇಂದ್ರ ಸರ್ಕಾರ ತಲಾ ರೂ.4 ಲಕ್ಷ ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ನಮ್ಮಲ್ಲಿ 12ರಿಂದ 18 ಲಕ್ಷ ರೂ.ವರೆಗೆ ನೀಡಿ ಖರೀದಿಸಲಾಗಿದೆ. ಅಂತಹ ವಿಶೇಷತೆ ಈ ವೆಂಟಿಲೇಟರ್ಗಳಲ್ಲಿ ಏನಿದೆ? ಇವುಗಳ ಬೆಲೆಯಲ್ಲಿ ಯಾಕೀ ವ್ಯತ್ಯಾಸ? | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ https://www.vijayavani.net/congress-mla-says-sachin-pilot-offered-rs-35-crore-for-cross-voting-in-rajasabha-election/