ನ್ಯೂಸ್

ಸಿಬಿಎಸ್‌ಇ 10,12 ತರಗತಿ ಪರೀಕ್ಷೆ ರದ್ದು: ಸುಪ್ರೀಂಕೋರ್ಟ್‌ಗೆ ಮಾಹಿತಿ

suchetana

ನವದೆಹಲಿ: ಸಿಬಿಎಸ್‌ಇ ಮಂಡಳಿ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಜುಲೈ 1 ರಿಂದ ಜುಲೈ 15 ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಸದ್ಯ ರದ್ದುಪಡಿಸಲಾಗಿದೆ. ಪರೀಕ್ಷೆ ನಡೆಸಲು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅನುಕೂಲ ಆದರೆ, ಅದನ್ನು ನಡೆಸುವ ಕುರಿತು ತೀರ್ಮಾನಿಸಲಾಗುವುದು. ಸದ್ಯ ಅದನ್ನು ರದ್ದುಪಡಿಸಲಾಗಿದೆ. 12 ನೇ ತರಗತಿ ವಿದ್ಯಾರ್ಥಿಗಳನ್ನು ಕಳೆದ 3 ಪರೀಕ್ಷೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಒಂದು ವೇಳೆ ನಂತರ ಪರೀಕ್ಷೆ ನಡೆದರೆ ಅದನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿದೆ ಎಂದು ಮಂಡಳಿ ಕೋರ್ಟ್‌ಗೆ ತಿಳಿಸಿದೆ.

ಕರೊನಾವೈರಸ್ ಬಿಕ್ಕಟ್ಟಿನಿಂದಾಗಿ ಸಿಬಿಎಸ್‌ಇಯ 10 ಮತ್ತು 12 ನೇ ತರಗತಿಗಳ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಹಲವಾರು ಪಾಲಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮಂಡಳಿಯು ಈ ವಿವರಣೆ ನೀಡಿದೆ.

ಕರೊನಾವೈರಸ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಜುಲೈನಲ್ಲಿ ನಡೆಯಲಿರುವ ಬೋರ್ಡ್ ಪರೀಕ್ಷೆಗಳನ್ನು ಮುಂದೂಡುವಂತೆ ಕೆಲ ಪಾಲಕರು ಕೋರಿದ್ದರೆ, ಈ ಪರೀಕ್ಷೆಗಳನ್ನು ರದ್ದು ಮಾಡುವಂತೆ ಇನ್ನೂ ಕೆಲವರು ಕೋರಿದ್ದರು.

ಪರೀಕ್ಷೆ ರದ್ದತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮಂಡಳಿಯು ಮಾಹಿತಿ ನೀಡಿದೆ, ಆದರೆ ಇದುವರೆಗೆ ಅದರಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಆದ್ದರಿಂದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರಕಟಣೆಗಾಗಿ ಕಾಯುತ್ತಿದ್ದಾರೆ.

10ನೇ ತರಗತಿಯ ಪರೀಕ್ಷೆ ಸಂಪೂರ್ಣವಾಗಿ ರದ್ದಾಗಿದ್ದರೂ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ 12ನೇ ತರಗತಿ ಪರೀಕ್ಷೆಗಳನ್ನು ಮುಂದಿನ ದಿನಗಳಲ್ಲಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಮಂಡಳಿಯು ಏನು ಹೇಳುತ್ತದೆ ಎಂಬುದನ್ನು ಕಾಯಬೇಕಿದೆ.