Election Commission: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅಫಿಡವಿಟ್ ಸಲ್ಲಿಸಿದ್ದು, ಯಾವುದೇ ವ್ಯಕ್ತಿಗೆ ಪೂರ್ವ ಸೂಚನೆ ನೀಡದೆ ಮತ್ತು ಅವರ ಅಭಿಪ್ರಾಯವನ್ನು ಆಲಿಸದೆ ಹೆಸರನ್ನು ಪಟ್ಟಿಯಿಂದ ಅಳಿಸಲಾಗುವುದಿಲ್ಲ ಎಂದು ಅದರಲ್ಲಿ ತಿಳಿಸಿದೆ.
ಪರಿಷ್ಕರಣೆಗಳನ್ನು ಪ್ರಶ್ನಿಸುತ್ತಿರುವ ಅರ್ಜಿದಾರರು ನ್ಯಾಯಾಲಯವನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಆಯೋಗ, ಈ ಪ್ರಯತ್ನಕ್ಕೆ ಕೈ ಹಾಕಿದವರಿಗೆ ಭಾರಿ ತಂಡ ವಿಧಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದೆ.
ಯಾವುದೇ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು, ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಆಯೋಗ ತೆಗೆದುಕೊಂಡಿದ್ದು, ಎರಡು ಹಂತದ ಮೇಲ್ಮನವಿ ಕಾರ್ಯವಿಧಾನದ ಮೂಲಕ ಜನರ ಅನಮಾನವನ್ನು ದೂರ ಮಾಡುವ ಭರವಸೆ ನೀಡಿದೆ.
ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಕರಡು ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಅನುಕೂಲವಾಗುವಂತೆ, ಎಲ್ಲ ರಾಜಕೀಯ ಪಕ್ಷಗಳಿಗೆ ಮುದ್ರಿತ ಮತ್ತು ಡಿಜಿಟಲ್ ಪ್ರತಿಗಳನ್ನು ಒದಗಿಸಲಾಗಿದೆ ಮತ್ತು ಸಾರ್ವಜನಿಕರಿಗೆ ಆನ್‌ಲೈನ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಟ್ರಂಪ್-ಪುಟಿನ್ ಸಭೆ: ಈ ಪ್ರಯತ್ನಗಳನ್ನು ಬೆಂಬಲಿಸಲು ಸಿದ್ಧ ಎಂದ ಭಾರತ| Ministry of External Affairs
ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಜಾಗೃತಿ ಅಭಿಯಾನಗಳು, ಸ್ಥಳೀಯ ನಿವಾಸಿಗಳನ್ನು ತೊಡಗಿಸಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಭೇಟಿಗಳು ಮತ್ತು ಇತರ ಉಪಕ್ರಮಗಳು ಸೇರಿವೆ.
ಬಿಹಾರದಿಂದ ಯಾವುದೇ ತಾತ್ಕಾಲಿಕ ವಲಸಿಗರನ್ನು ಹೊರಗಿಡದಂತೆ ನೋಡಿಕೊಳ್ಳಲು, 246 ಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹೀರಾತುಗಳನ್ನು ನೀಡಲಾಗಿದೆ, ಯಾವುದೇ ನಗರ ಮತದಾರರನ್ನು ಹೊರಗಿಡದಂತೆ ನೋಡಿಕೊಳ್ಳಲು, ಎಲ್ಲಾ 261 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ನಗರ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ.(ಏಜೆನ್ಸೀಸ್)