ಬೆಂಗಳೂರು: ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯವಾಗುವುದಿಲ್ಲ. ಈ ಬಗ್ಗೆ ತೀರ್ಮಾನವಾಗುವವರೆಗೆ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡುವುದಿಲ್ಲ(No backlog recruitment till internal reservation is implemented) ಎಂದು ಸಚಿವರು ಹಾಗೂ ಶಾಸಕರು ಸ್ಪಷ್ಟಪಡಿಸಿದರು.
ಆಹಾರ ಸಚಿವ ಕೆ.ಎಚ್.ಮನಿಯಪ್ಪ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದರಾದ ಎಲ್.ಹನುಮಂತಯ್ಯ, ಬಿ.ಎನ್.ಚಂದ್ರಪ್ಪ, ಮತ್ತಿತರರು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೆಲವು ಸಂಘ- ಸಂಸ್ಥೆಗಳು, ಹೋರಾಟಗಾರರು ಹಾಗೂ ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಸರ್ಕಾರದ ವಿರುದ್ಧ ಭ್ರಾಂತಿ ಮೂಡಿಸುವ ಹಾಗೂ ತಪ್ಪು ಮಾಹಿತಿ ಹರಡುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನಾಯಕರ ವಿರುದ್ಧ ಅಪಮಾನಕಾರಕ ಶಬ್ದಗಳನ್ನು ಬಳಸುವುದು ಸೂಕ್ತವಲ್ಲ. ಸಮುದಾಯದ ಸಂಘಟನೆಗಳು ಹಾಗೂ ಸಂಘ-ಸಂಸ್ಥೆಗಳು ಯಾವುದೇ ರೀತಿಯ ಅಶಾಂತಿ ಮೂಡಿಸುವ ಹಾಗೂ ಅಪನಂಬಿಕೆ ಉಂಟು ಮಾಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಒಳ ಮೀಸಲಾತಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಹೇಳಲಾಗಿದೆ. ರಾಜ್ಯ ಸರ್ಕಾರ ಅದಕ್ಕೆ ಬದ್ಧವಾಗಿದೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ತ ದತ್ತಾಂಶವನ್ನು ಆಧರಿಸಿ ಯಾರಿಗೂ ಅನ್ಯಾಯ ಆಗದಂತೆ ನಿಶ್ಚಿತವಾಗಿಯೂ ಒಳ ಮೀಸಲಾತಿ ಜಾರಿಗೊಳಿಸಲಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಆಯಾ ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೆ ತರುವ ಅಧಿಕಾರ ನೀಡಿದೆ. ಈ ತೀರ್ಪಿನಿಂದ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿದ್ದು, 30 ವರ್ಷಗಳ ನಮ್ಮ ಹೋರಾಟಕ್ಕೆ ಲ ದೊರೆತಿದೆ. ಸ್ವಲ್ಪ ತಾಳ್ಮೆಯಿಂದ ಎಲ್ಲರೂ ಕಾಯಬೇಕು ಎಂದು ತಿಳಿಸಿದರು.
ಒಳಮೀಸಲಾತಿ ಜಾರಿಗೆ ನಮ್ಮ ಸರ್ಕಾರದ ಯಾವ ಸಚಿವರು, ಶಾಸಕರ ವಿರೋಧವಿಲ್ಲ. ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ನಿವೃತ್ತ ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ 3 ತಿಂಗಳೊಳಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲು ಸೂಚಿಸಲಾಗಿದೆ. ಆದಷ್ಟು ಶೀಘ್ರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಹೇಳಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ನಮ್ಮಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಸರ್ಕಾರದ ಬಗ್ಗೆ ಸಂಶಯ ಬೇಡ. ಕೆಲಸ ಮಾಡುವವರ ಬಗ್ಗೆ ಅಪಪ್ರಚಾರ ಮಾಡಬಾರದು. ದತ್ತಾಂಶ ಇಲ್ಲದಿದ್ದರೆ ಕೋರ್ಟ್‌ನಲ್ಲಿ ಬಿದ್ದು ಹೋಗುತ್ತದೆ. ಹಾಗಾಗಿ ನಮ್ಮ ಸರ್ಕಾರ ಸೂಕ್ತ ಎಂಪರಿಕಲ್ ಡೇಟಾ ಆಧರಿಸಿ ಒಳ ಮೀಸಲಾತಿ ಜಾರಿಗೊಳಿಸಲಿದೆ ಎಂದು ತಿಳಿಸಿದರು.
ಯಾವುದೇ ಸಂಘಟನೆ ಆತಂಕ ವ್ಯಕ್ತಪಡಿಸಬಾರದು. ಸಲಹೆ ಇದ್ದರೆ ಸಂಘಟನೆಗಳು ಕೊಡಲಿ, ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇದರಲ್ಲಿ ರಾಜಕೀಯ ಬೆರೆಸಬಾರದು. ಸಿಎಂ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದರು.
ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ನ್ಯಾ.ನಾಗಮೋಹನದಾಸ್ ಯಾವುದೇ ಕಾರಣಕ್ಕೆ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದ ಹಾಗೆ ಅವರವರ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ವರದಿ ನೀಡಲು ಬದ್ಧರಿದ್ದಾರೆ. 7 ಲಕ್ಷ ಜನ ತಮ್ಮ ಮೂಲ ಜಾತಿ ಬರೆಸಿಲ್ಲ. ಇವರನ್ನು ಎಲ್ಲಿಗೆ ಸೇರಿಸಬೇಕು ಎಂಬ ಜಿಜ್ಞಾಸೆ ಇದೆ. ಈ ಕುರಿತು ತೀರ್ಮಾನ ತೆಗೆದುಕೊಂಡು ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ನಾವು 30 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸುಪ್ರೀಂ ತೀರ್ಪಿನಿಂದ ನಮ್ಮ ಹೋರಾಟಕ್ಕೆ ಫಲ ಸಿಗುವ ಕಾಲ ಹತ್ತಿರ ಬಂದಿದೆ. ಅದಕ್ಕಾಗಿ ನ್ಯಾ.ನಾಗಮೋಹನದಾಸ್ ಆಯೋಗ ರಚಿಸಲಾಗಿದೆ. ಒಳಮೀಸಲು ತೀರ್ಮಾನ ಆಗುವವರೆಗೆ ಯಾವುದೇ ನೇಮಕ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದರು.
ಕೆಲವು ಹೋರಾಟಗಾರರು ನಮ್ಮ ಸಮುದಾಯದ ಮುಗ್ದರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಸರ್ಕಾರಕ್ಕೆ ಮುಜುಗರ ಆಗುವಂತೆ ಟೀಕಿಸುವುದು ಸಲ್ಲದು. ವರದಿ ಬರುವವರೆಗೆ ತಾಳ್ಮೆಯಿಂದ ಇರಬೇಕು. ಬ್ಯಾಕ್ ಲಾಗ್ ನೇಮಕಕ್ಕೆ ತಡೆ ನೀಡಲಾಗಿದೆ. ಹಾಗಾಗಿ ಆತಂಕ ಬೇಡ ಎಂದು ಹೇಳಿದರು.
ಶಾಸಕರಾದ ಕೆ.ಎಸ್.ಬಸವಂತಪ್ಪ, ಡಾ.ತಿಮ್ಮಯ್ಯ, ಕೆಪಿಸಿಸಿ ಎಸ್‌ಸಿ ಘಟಕದ ಅಧ್ಯಕ್ಷ ಧರ್ಮಸೇನಾ, ವಸಂತಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.