ಶಿವಮೊಗ್ಗ: ಸಂಕಷ್ಟದ ಸಂದರ್ಭದಲ್ಲಿ ಸಮಾಜಕ್ಕೆ ಎನ್.ಜೆ.ರಾಜಶೇಖರ್ ಅವರ ನೆರವು ಅಗತ್ಯವಾಗಿರುತ್ತಿತ್ತು. ಸಂಬಂಧಗಳನ್ನು ಬೆಸೆಯುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಸಮಾಜಮುಖಿ ಕೆಲಸದಲ್ಲಿ ಸದಾ ತೊಡಗಿಸಿಕೊಂಡಿದ್ದ ಧೀಮಂತ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸೋಮವಾರ ಏರ್ಪಡಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಎನ್.ಜೆ.ರಾಜಶೇಖರ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ಭಿನ್ನಾಬಿಪ್ರಾಯವಿದ್ದರೂ ಅದನ್ನು ರಾಜಶೇಖರ್ ಬಗೆಹರಿಸುತ್ತಿದ್ದರು. ನನ್ನ ರಾಜಕೀಯದ ಆರಂಭದ ದಿನಗಳಲ್ಲಿ ಅನೇಕ ಬಾರಿ ಅವರು ಸೂಕ್ತ ಮಾರ್ಗದರ್ಶನ ನೀಡಿದ್ದರು ಎಂದು ಸ್ಮರಿಸಿದರು.
ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಶರಣರ ವ್ಯಕ್ತಿತ್ವ ರೂಪಿಸಿಕೊಂಡಿದ್ದ ರಾಜಶೇಖರ್ ಪಕ್ಷ ಮತ್ತು ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಬದುಕು ಪಾರದರ್ಶಕವಾಗಿತ್ತು ಎಂದು ಬಣ್ಣಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಾಲೇಜು ದಿನಗಳಿಂದ ನಾವೆಲ್ಲರೂ ಸಹಪಾಠಿಗಳು. ನಮ್ಮನ್ನು ಚಡ್ಡಿಗಳು ಎಂದು ರಾಜಶೇಖರ್ ಅಪಹಾಸ್ಯ ಮಾಡುತ್ತಿದ್ದರು. ಕೊನೆಗೆ ನಮಗಿಂತ ಹೆಚ್ಚಾಗಿ ಪಕ್ಷ ಮತ್ತು ಸಂಘಟನೆ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ತಮಾಷೆಯ ವ್ಯಕ್ತಿತ್ವ, ನೇರವಾಗಿ ಹೇಳುವ ಸ್ವಭಾವದ ಅಪರೂಪದ ಸಂಘಟಕರಾಗಿದ್ದರು ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಬಿಜೆಪಿ ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮುಂತಾದವರು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ತಾವರೆಕೆರೆ, ಯಡಿಯೂರು, ಬಿಳಕಿ ಮಠದ ಶ್ರೀಗಳು ಮೃತರ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.