ನ್ಯೂಸ್

ನಿಜಾಮುದ್ದೀನ್‌ ಸಭೆಗೆ ಅನುಮತಿ ನೀಡಿದವರಾರು: ಶರದ್‌ ಪವಾರ್‌ ಪ್ರಶ್ನೆ

ನವದೆಹಲಿ: ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ಮಸೀದಿಯಲ್ಲಿ ಸಭೆ ನಡೆಸಲು ತಬ್ಲಿಘಿ ಜಮಾತ್‌ ಸದ್ಯರಿಗೆ ಅನುಮತಿ ನೀಡಿದವರು ಯಾರು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಪ್ರಶ್ನಿಸಿದ್ದಾರೆ.

ಈ ಕುರಿತು ಜನರೊಂದಿಗೆ ಫೇಸ್‌ಬುಕ್‌ ಲೈವ್‌ನಲ್ಲಿ ಪವಾರ್‌ ಪ್ರಶ್ನೆ ಹಾಕಿದ್ದಾರೆ.ಇಂಥದ್ದೊಂದು ಸಭೆ ನಡೆಸಲು ಅನುಮತಿ ನೀಡುವ ಮುಂದೆ ಯೋಚನೆ ಏಕೆ ಮಾಡಲಿಲ್ಲ, ಇದಕ್ಕೆ ಅನುಮತಿ ನೀಡಿರುವವರು ಯಾರು ಎಂದು ಏಕೆ ಇದುವರೆಗೂ ಯಾರು ಹೇಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಇಂಥದ್ದೇ ಬೃಹತ್‌ ಮಟ್ಟದ ಸಭೆಯನ್ನು ಮುಂಬೈ ಮತ್ತು ಸೋಲಾಪುರದಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಮುಂಬೈನಲ್ಲಿ ಮಾಡಲು ಅವರಿಗೆ ಅನುಮತಿ ನೀಡಿರಲಿಲ್ಲ. ನಿಯಮ ಉಲ್ಲಂಘಿಸಿ ಸೋಲಾಪುರದಲ್ಲಿ ಮಾಡಿದಾಗ ಪೊಲೀಸರು ಕಠಿಣ ಕ್ರಮ ತೆಗೆದುಕೊಂಡಿದ್ದರು. ಹಾಗಿದ್ದ ಮೇಲೆ ಇಲ್ಲಿ ಸಭೆ ನಡೆದದ್ದು ಹೇಗೆ ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಮತ್ತು ಮುಖ್ಯಮಂತ್ರಿ ಉದ್ಭವ ಠಾಕ್ರೆ ಅವರು ಅನುಮತಿ ನೀಡದೇ, ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿರುವಾಗ ದೆಹಲಿಯಲ್ಲಿ ಇಂಥ ನಿರ್ಧಾರ ತೆಗೆದುಕೊಳ್ಳಲು ಏಕೆ ಸಾಧ್ಯವಾಗಲಿಲ್ಲ. ಇವರಿಗೆ ನಿಜವಾಗಿಯೂ ಅನುಮತಿ ನೀಡಿದ್ದು ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನಿಜಾಮುದ್ದೀನ್‌ ಸಭೆಯಿಂದಾಗಿ ಬೃಹತ್‌ ಮಟ್ಟದಲ್ಲಿ ಸೋಂಕು ಹರಡುತ್ತಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ‌‌‌ಮಾಡುತ್ತಿರುವ ಬಗ್ಗೆ ಉಲ್ಲೇಖಿಸಿರುವ ಶರದ್‌ ಪವಾರ್‌, ‘ಇದಕ್ಕೆ ಇಷ್ಟೊಂದು ಪ್ರಾಮುಖ್ಯ ಕೊಡುವ ಅಗತ್ಯ ಏನಿದೆ’ ಎಂದೂ ಪ್ರಶ್ನಿಸಿದ್ದಾರೆ.

ನಿಜಾಮುದ್ದೀನ್‌ ಸಭೆಯಿಂದಾಗಿ ದೇಶದಲ್ಲಿ 400ಕ್ಕೂ ಅಧಿಕ ಸೋಂಕಿತರು ಹಾಗೂ 15ಕ್ಕೂ ಅಧಿಕ ಸಾವು ಉಂಟಾಗಿದೆ. ಕನಿಷ್ಠ 9 ಸಾವಿರ ಮಂದಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದ್ದು, ಸಭೆಯ ನಂತರ ವಿವಿಧೆಡೆ ಇವರು ಸಂಚರಿಸುವ ಕಾರಣ, ವೈರಸ್‌ ಶೀಘ್ರದಲ್ಲಿ ಹರಡುತ್ತಿರುವ ಬಗ್ಗೆ ವರದಿಯಾಗಿದೆ.