- ಮೂರು ವರ್ಷಗಳ ಬಳಿಕ ನಟನೆಗೆ ಮರಳಿದ ನಿವೇತಾ ಪೇಥುರಾಜ್
- ನಟಿಗೆ ಕೊನೆಗೂ ಸಿಕ್ತು ದೊಡ್ಡ ತಿರುವು
- ಚಿರು, ವೆಂಕಿ ಜತೆ ನಟಿಸಲಿದ್ದಾರೆ ಯುವ ನಟಿ
ತೆಲುಗಿನ ‘ಅಲಾ ವೈಕುಂಠಪುರಂಲೊ’, ತಮಿಳಿನ ‘ಸಾಂಗತಮಿಳನ್’ ಸೇರಿ 15ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ನಿವೇತಾ ಪೇಥುರಾಜ್ ಅವರಿಗಿದೆ. ತಮಿಳಿನ ‘ಓರು ನಾಲ್ ಕೂತು’ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ಅವರು ಬಳಿಕ ಕಾಲಿವುಡ್, ಟಾಲಿವುಡ್‌ನ ಗಮನಾರ್ಹ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟರಾದ ವಿಜಯ್ ಸೇತುಪಥಿ, ರವಿ ಮೋಹನ್, ಸಾಯಿ ಧರ್ಮತೇಜ್, ರಾಮ್ ಪೊತಿನೇನಿ ಜತೆ ಸ್ಕ್ರೀನ್ ಹಂಚಿಕೊಂಡು ಗಮನಸೆಳೆದಿದ್ದಾರೆ. ಇಂತಹ ನಿವೇತಾ ಪೇಥುರಾಜ್ ತಮ್ಮ ವೃತ್ತಿ ಜೀವನದಲ್ಲಿ ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗುತ್ತಿದ್ದು, ಸದ್ಯ ಅವರು ತೆಲುಗಿನ ಎರಡು ಪ್ರತ್ಯೇಕ ಬಿಗ್‌ಬಜೆಟ್ ಚಿತ್ರಗಳ ಮೂಲಕ ಖ್ಯಾತ ನಟರಾದ ಚಿರಂಜೀವಿ ಮತ್ತು ವೆಂಕಟೇಶ್ ಜತೆ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ. ಚಿರಂಜೀವಿ ಅಭಿನಯದ 158ನೇ ಚಿತ್ರ ಇತ್ತೀಚೆಗೆ ಸೆಟ್ಟೇರಿತ್ತು.ಈ ಮಾಸ್-ಆ್ಯಕ್ಷನ್ ಚಿತ್ರದಲ್ಲಿ ಈಗಾಗಲೇ ನಟಿಯರಾದ ಪ್ರಿಯಾಮಣಿ, ಅನಸ್ವರ ರಾಜನ್ ಚಿತ್ರತಂಡ ಸೇರಿರುವುದು ಗೊತ್ತಾಗಿದೆ. ಇದೀಗ ನಿವೇತಾ ಈ ಚಿತ್ರಕ್ಕೆ ಆಯ್ಕೆಯಾಗಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ ‘ವಿಕ್ಟರಿ’ ವೆಂಕಟೇಶ್ ಅಭಿನಯದ ಫ್ಯಾಮಿಲಿ ಡ್ರಾಮಾ ‘ಆದರ್ಶ ಕುಟುಂಬಂ’ ಚಿತ್ರಕ್ಕೆ ಕೂಡ ನಿವೇತಾ ಆಯ್ಕೆಯಾಗಿದ್ದಾರೆ. ಈ ಎರಡು ಚಿತ್ರದಲ್ಲಿ ಲೀಡಿಂಗ್ ರೋಲ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ, ‘ಬೂ’ ತೆರೆಕಂಡು ಮೂರು ವರ್ಷಗಳ ಬಳಿಕ ನಿವೇತಾಗೆ ನಟನೆಗೆ ಮರಳಿದ್ದು, ಇದು ಅವರ ಭವಿಷ್ಯಕ್ಕೆ ದೊಡ್ಡ ತಿರುವು ಸಿಗಲಿದೆ ಎನ್ನಲಾಗುತ್ತಿದೆ. -ಏಜೆನ್ಸೀಸ್