2025-26ರ ಸಾಲಿನ ಅಖಿಲ ಭಾರತ ಇಂಟರ್ ಎನ್‌ಐಟಿ ಕ್ರೀಡಾಕೂಟದಲ್ಲಿ ಎನ್‌ಐಟಿಕೆ ಸುರತ್ಕಲ್ ಒಟ್ಟು 144 ಅಂಕಗಳನ್ನು ಗಳಿಸುವ ಮೂಲಕ ದೇಶದ ಎಲ್ಲಾ ಎನ್‌ಐಟಿಗಳ ಪೈಕಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಂಗಳೂರು: 2025-26ರ ಸಾಲಿನ ಅಖಿಲ ಭಾರತ ಇಂಟರ್ ಎನ್‌ಐಟಿ ಕ್ರೀಡಾಕೂಟದಲ್ಲಿ ಎನ್‌ಐಟಿಕೆ ಸುರತ್ಕಲ್ ಒಟ್ಟು 144 ಅಂಕಗಳನ್ನು ಗಳಿಸುವ ಮೂಲಕ ದೇಶದ ಎಲ್ಲಾ ಎನ್‌ಐಟಿಗಳ ಪೈಕಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಥ್ಲೆಟಿಕ್ಸ್, ತಂಡ ಕ್ರೀಡೆಗಳು ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ಹಲವು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಎನ್‌ಐಟಿಕೆ, ಜಂಟಿ ರಾಷ್ಟ್ರೀಯ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಪುರುಷರ ಅಥ್ಲೆಟಿಕ್ಸ್, ಕಬಡ್ಡಿ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್, ವಾಲಿಬಾಲ್, ಖೋ-ಖೋ ಮತ್ತು ಈಜು ವಿಭಾಗಗಳಲ್ಲಿ ಎನ್‌ಐಟಿ ಕೆ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
ಎನ್‌ಐಟಿ ಜಲಂಧರ್‌ನಲ್ಲಿ ನಡೆದ ಕೂಟದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಖಿಲ್ ಬನೋತ್ ರಿಲೇಯಲ್ಲಿ ಮೂರು ಚಿನ್ನದ ಪದಕ ಗೆದ್ದರೆ, ಹ್ಯಾಮರ್ ಎಸೆತದಲ್ಲಿ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವಿ. ಚಿನ್ನದ ಪದಕದೊಂದಿಗೆ ಮೋಸ್ಟ್ ಪವರ್‌ಫುಲ್ ಮ್ಯಾನ್ ಪ್ರಶಸ್ತಿ ಪಡೆದರು. ಎನ್‌ಐಟಿ ದೆಹಲಿಯಲ್ಲಿ ನಡೆದ ಕಬಡ್ಡಿಯಲ್ಲಿ ಪುರುಷರ ತಂಡ ಚಿನ್ನ ಗೆದ್ದು, ವೀರೇಂದ್ರ ಎಂ. ಸರಣಿ ಶ್ರೇಷ್ಠ ಎನಿಸಿಕೊಂಡರು. ಎನ್‌ಐಟಿ ರೌರ್ಕೆಲಾದಲ್ಲಿ ನಡೆದ ಕೂಟದಲ್ಲಿ ಮಹಿಳೆಯರ ವಾಲಿಬಾಲ್, ಖೋ-ಖೋ ಹಾಗೂ ಈಜು ತಂಡಗಳು ಚಿನ್ನದ ಪದಕ ಬಾರಿಸಿದವು. ಸುವಾಲಿ ಪಿ. ಶೆಟ್ಟಿ ಶ್ರೇಷ್ಠ ಈಜುಗಾರ್ತಿ ಗೌರವಕ್ಕೆ ಭಾಜನರಾದರು. ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಮಾನಶ್ರೀ ಶ್ರೇಷ್ಠ ಆಟಗಾರ್ತಿ ಹಾಗೂ ಎನ್‌ಐಟಿ ಜಮ್‌ಶೆಡ್‌ಪುರದಲ್ಲಿ ನಡೆದ ಪುರುಷರ ಟೇಬಲ್ ಟೆನ್ನಿಸ್‌ನಲ್ಲಿ ದಿಲೀಪ್ ಜಿ. ಶ್ರೇಷ್ಠ ಆಟಗಾರ ಟೈಟಲ್‌ನೊಂದಿಗೆ ಎನ್‌ಐಟಿ ಕೆ ಚಿನ್ನದ ಪದಕ ಗಳಿಸಿತು.
ಚೆಸ್‌ನಲ್ಲಿ ಪುರುಷರ ತಂಡ ಬೆಳ್ಳಿ ಮತ್ತು ಮಹಿಳೆಯರ ತಂಡ ಕಂಚು ಪದಕ ಗೆದ್ದರೆ, ಎನ್‌ಐಟಿ ದೆಹಲಿಯಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಹಿತೇಶ್ ದಾಗರ್ ಚಾಂಪಿಯನ್ ಆಫ್ ಚಾಂಪಿಯನ್ಸ್ ಪಟ್ಟ ಪಡೆದರು. ವೇಟ್‌ಲಿಫ್ಟಿಂಗ್‌ನಲ್ಲಿ ಸಂಸ್ಥೆಯು ಎರಡು ಚಿನ್ನ, ಒಂದು ಕಂಚು ಪದಕದೊಂದಿಗೆ ಒಟ್ಟಾರೆ ಮೂರನೇ ಸ್ಥಾನ ಪಡೆಯಿತು. ಪುರುಷರ ಹ್ಯಾಂಡ್‌ಬಾಲ್ ತಂಡವು ನಾಗಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚು ಪದಕ ತನ್ನದಾಗಿಸಿಕೊಂಡಿದೆ. ಇದಲ್ಲದೆ, ಜಲಂಧರ್‌ನಲ್ಲಿ ನಡೆದ ಎನ್‌ಐಟಿ ಸಿಬ್ಬಂದಿ ವರ್ಗದ ಚೆಸ್ ಪಂದ್ಯಾವಳಿಯಲ್ಲಿ ಎನ್‌ಐಟಿಕೆ ಸಿಬ್ಬಂದಿ ಹಾಗೂ ಅಧ್ಯಾಪಕರ ತಂಡವು 4ನೇ ಸ್ಥಾನ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದೆ.