ಭಾರತ್ ಎಐ ಸ್ಟೂಡೆಂಟ್ ಚಾಲೆಂಜ್ ರಾಷ್ಟ್ರಮಟ್ಟದ ಸ್ಫರ್ಧೆಯಲ್ಲಿ ಎನ್‌ಐಟಿಕೆಗೆ ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನ ಎಆರ್‌ಎಮ್ ಲ್ಯಾಬ್ಸ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ನ್ಯೂಸ್

ಭಾರತ್ ಎಐ ಸ್ಟೂಡೆಂಟ್ ಚಾಲೆಂಜ್ ರಾಷ್ಟ್ರಮಟ್ಟದ ಸ್ಫರ್ಧೆಯಲ್ಲಿ ಎನ್‌ಐಟಿಕೆಗೆ ಪ್ರಶಸ್ತಿ

ಮಂಗಳೂರು: ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಐಐಟಿ ದೆಹಲಿ ಹಾಗೂ ಎಆರ್‌ಎಂ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಭಾರತ್ ಸ್ಟೂಡೆಂಟ್ ಚಾಲೆಂಜ್ ಸ್ಪರ್ಧೆಯಲ್ಲಿ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.
ಎನ್‌ಐಟಿಕೆ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ 4ನೇ ಸೆಮಿಸ್ಟರ್ ಬಿ.ಟೆಕ್ ವಿದ್ಯಾರ್ಥಿಗಳಾದ ಶ್ರೇಷ್ ಪಾರ್ಟಿ, ರುಶಿಲ್ ಜೈನ್ ಮತ್ತು ಶ್ರೀಪ್ರಹ್ಲಾದ್ ಮುಕುಂತನ್ ಅವರನ್ನೊಳಗೊಂಡ ಟೀಮ್ ವೆಲಾಸಿಟಿ ಗೇಟ್ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇವರಿಗೆ ಇಸಿಇ ವಿಭಾಗದ ಪ್ರೊ. ಸುಮನ್ ಡೇವಿಡ್ ಮಾರ್ಗದರ್ಶನ ನೀಡಿದ್ದರು.
ಐದು ವಾರಗಳ ಕಾಲ ನಡೆದ ಈ ವರ್ಚುವಲ್ ಸ್ಪರ್ಧೆಯಲ್ಲಿ ದೇಶಾದ್ಯಂತ ಒಟ್ಟು 340 ಪ್ರಾಜೆಕ್ಟ್‌ಗಳು ಸಲ್ಲಿಕೆಯಾಗಿದ್ದವು. ಅಂತಿಮ ಸುತ್ತಿನಲ್ಲಿ ಕಠಿಣ ಪೈಪೋಟಿ ನಡೆಸಿ ಎನ್‌ಐಟಿಕೆ ತಂಡವು ವಿಜೇತರಾಗಿ ಹೊರಹೊಮ್ಮಿದೆ. ಬೆಂಗಳೂರಿನ ಎಆರ್‌ಎಮ್ ಲ್ಯಾಬ್ಸ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.