ರಾಘವ ಶರ್ಮ ನಿಡ್ಲೆ
ನವದೆಹಲಿ: 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರಬಲ ರಾಷ್ಟ್ರೀಯ ಮೈತ್ರಿ ಸಾಧಿಸುವಲ್ಲಿ ವಿಫಲವಾದ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು 2024ರ ಲೋಕಸಭೆ ಚುನಾವಣೆಗೆ ಮುನ್ನ ಮತ್ತೊಂದು ಅಂಥದ್ದೇ ಯತ್ನಕ್ಕೆ ಕೈಹಾಕಲು ಮುಂದಾಗಿವೆ. ಬಿಹಾರ ಸಿಎಂ ನಿತಿಶ್ ಕುಮಾರ್ ವಿಪಕ್ಷಗಳ ಮೈತ್ರಿ ರಚಿಸುವ ಕಸರತ್ತಿಗೆ ಕೈ ಹಾಕಿದ್ದು, ಅದರ ಭಾಗವಾಗಿ ಇಂದು ಬಿಹಾರ ಪಟನಾದಲ್ಲಿ ವಿಪಕ್ಷ ನಾಯಕರೊಂದಿಗೆ ಮಹತ್ವದ ಸಭೆ ಕರೆದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸ ಬೇಕೆಂದರೆ ನಾವು ಒಂದಾಗಬೇಕು ಎಂಬ ವಾಸ್ತವ ವಿಪಕ್ಷಗಳಿಗೆ ತಿಳಿದಿದ್ದರೂ, ರಾಜ್ಯ ಮಟ್ಟದಲ್ಲಿನ ರಾಜಕೀಯ ಸಮೀಕರಣಗಳಿಂದಾಗಿ ವಿಪಕ್ಷಗಳ ಮೈತ್ರಿಕೂಟ ಹುಟ್ಟುವ ಮುನ್ನವೇ ಸಾಯುತ್ತಾ ಬಂದಿರುವ ನಿದರ್ಶನವನ್ನು ದೇಶ ಹಲವು ಬಾರಿ ಕಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ವಿಪಕ್ಷಗಳು ಸವೆಸುವ ಹಾದಿ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ.
ದೆಹಲಿಯ ಆಮ್ ಆದ್ಮಿ ಪಾರ್ಟಿ, ಬಂಗಾಳದ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಪಕ್ಷದ ಕಡು ವಿರೋಧಿಗಳಾಗಿದ್ದು, ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಒಪ್ಪುವ ಸಾಧ್ಯತೆ ಕಡಿಮೆ. ಮೇಲಾಗಿ, ಬಂಗಾಳದಲ್ಲಿ ಕಾಂಗ್ರೆಸ್- ಎಡಪಕ್ಷಗಳ ಸ್ನೇಹಕೂಟದ ವಿರುದ್ಧ ಮಮತಾ ಬ್ಯಾನರ್ಜಿ ಬುಸುಗುಡುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷ ಎಡಪಕ್ಷಗಳ ಸಂಗ ಬಿಟ್ಟರೆ ನಾನು ಈ ಮೈತ್ರಿಯಲ್ಲಿರುತ್ತೇನೆ ಎನ್ನುವುದು ಮಮತಾ ಬಿಗಿ ನಿಲುವು. ಆದರೆ, ಕೇರಳ ಮತ್ತು ಬಂಗಾಳದಲ್ಲಿ ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಎಡಪಕ್ಷಗಳನ್ನು ರಾಷ್ಟ್ರೀಯ ಮೈತ್ರಿಯಿಂದ ದೂರ ಮಾಡುವುದು
ಕಷ್ಟಕರ. ಇದು ಮಮತಾಗೆ ಗೊತ್ತಿಲ್ಲದೇನಿಲ್ಲ. ಮೈತ್ರಿಕೂಟದಲ್ಲಿ ನನ್ನ ಮಾತು ಹೆಚ್ಚು ನಡೆಯಬೇಕು ಎಂಬ ಸಂದೇಶ ರವಾನಿಸುವ ಯತ್ನವೂ ಇದರ ಹಿಂದಿದೆ ಎನ್ನುವುದು ಗುಟ್ಟಿನ ವಿಷಯವೇನಲ್ಲ.
ಸಭೆಯಲ್ಲಿ ಉತ್ತರ ಪ್ರದೇಶದಿಂದ ಸಮಾಜವಾದಿ ಪಕ್ಷ ಪ್ರತಿನಿಧಿತ್ವವಿದ್ದರೂ, ಮತ್ತೊಂದು ಪ್ರಾದೇಶಿಕ ಪಕ್ಷ ಬಿಎಸ್ಪಿಗೆ ನಿತೀಶ್ ಕುಮಾರ್ ಆಹ್ವಾನ ನೀಡಿಲ್ಲ. ಹೀಗಿದ್ದರೂ ಗುರುವಾರದಂದು ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್ಪಿ ನಾಯಕಿ ಮಾಯಾವತಿ, ತಾನು ಈ ಸಭೆಯಲ್ಲಿ ಭಾಗಿಯಾಗುತ್ತಿಲ್ಲ. ವಿಪಕ್ಷ ನಾಯಕರೆಲ್ಲ ಸೇರಿ ಕೈ ಕೈ ಜೋಡಿಸುತ್ತಿದ್ದಾರೆಯೇ ವಿನಃ ಅವರ ಹೃದಯಗಳು ಬೆಸೆದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಜತೆಗಿನ ಒಳ-ಒಪ್ಪಂದ ಕೂಡ ಇದಕ್ಕೆ ಕಾರಣವಿರಬಹುದು. ಏತನ್ಮಧ್ಯೆ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ, ತೆಲಂಗಾಣದ ಭಾರತ ರಾಷ್ಟ್ರ ಸಮಿತಿ ಪಕ್ಷಕ್ಕೂ ಆಹ್ವಾನ ನೀಡಲಾಗಿಲ್ಲ.
ಲೋಕಸಭೆ ಚುನಾವಣೆ ಮುನ್ನ ಎನ್ಡಿಎ ಮೈತ್ರಿಕೂಟಕ್ಕೆ ಮರು ಸೇರ್ಪಡೆಯಾಗಲು ತೆರೆಮರೆ ಯತ್ನ ಮಾಡುತ್ತಿರುವ ಆಂಧ್ರದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಈ ಸಭೆಯಿಂದ ದೂರವುಳಿದಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಭಾವ ಹೊಂದಿರುವ ಜಯಂತ್ ಚೌಧುರಿ ನಾಯಕತ್ವದ ರಾಷ್ಟ್ರೀಯ ಲೋಕದಳ ಸಭೆಗೆ ಹಾಜರಾಗುತ್ತಿಲ್ಲ. ರಾಜ್ಯದಲ್ಲಿ ಸಮಾಜವಾದಿ ಪಕ್ಷ ದೊಂದಿಗೆ ಅಂತರ ಕಾಯ್ದುಕೊಂಡರುವ ಚೌಧುರಿ, ಕುಟುಂಬ ಕಾರ್ಯಕ್ರಮದ ನೆಪವೊಡ್ಡಿ ಸಭೆಗೆ ಗೈರಾಗಲು ನಿರ್ಧರಿಸಿದ್ದಾರೆನ್ನಲಾಗಿದೆ.
ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದ್ದು, ದೆಹಲಿಯ ಆಡಳಿತಾತ್ಮಕ ಸೇವೆಗಳಿಗೆ ಸಂಬಂಧಿಸಿ ಸುಗ್ರೀವಾಜ್ಞೆ ಜಾರಿಗೆ ತರಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸುವ ನಮ್ಮ ನಿಲುವಿಗೆ ಬೆಂಬಲ ಸೂಚಿಸಬೇಕು. ಇಲ್ಲವಾದಲ್ಲಿ, ವಿಪಕ್ಷಗಳ ಸಭೆ ಬಹಿಷ್ಕರಿಸಿ, ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದೆ. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ನ್ನು ಗುರಿ ಮಾಡಿರುವ ಪ್ರಮುಖ ಉದ್ದೇಶ ಏನೆಂದರೆ ; ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷ ಹಿರಿಯಣ್ಣನ ರೀತಿಯ ವರ್ತನೆ ತೋರುವುದು ಬೇಡ. ಬದಲಿಗೆ, ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಕ್ಷೇತ್ರಗಳ ಆಯ್ಕೆ ವಿಷಯದಲ್ಲಿ ಉದಾರತೆ ತೋರಬೇಕು ಎನ್ನುವುದೇ ಆಗಿದೆ. ಆದರೆ, ಲೋಕಸಭೆಯಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸ ಬಯಸಿರುವ ಕಾಂಗ್ರೆಸ್ ಇದಕ್ಕೆಲ್ಲಾ ಸುಲಭದಲ್ಲಿ ಒಪ್ಪಲಿಕ್ಕಿಲ್ಲ. ಹೀಗಾಗಿ, ನಾಳಿನ ಸಭೆ ಯಾವ ರೀತಿ ಸಾಗುತ್ತದೆ ಮತ್ತು ಈ ಪಕ್ಷಗಳ ಮನದಾಶಯಗಳನ್ನು ನಿತಿಶ್ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಮೈತ್ರಿಕೂಟದ ಭವಿಷ್ಯವನ್ನು ನಿರ್ಧರಿಸಲಿದೆ.
ವಿಪಕ್ಷಗಳ ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಯಾರೆಂಬ ಪ್ರಶ್ನೆಯಿದ್ದರೂ, ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗದು. ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಕೂಡ ಈ ವಿಚಾರದ ಮೇಲೆ ಬೆಳಕು ಚೆಲ್ಲಿದ್ದು, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕ ನಾಯಕತ್ವದ ಬಗ್ಗೆ ನಿರ್ಧಾರವಾಗುತ್ತದೆ. ವಿಪಕ್ಷಗಳು ಒಗ್ಟಟ್ಟಾಗಿ ಸೇರಿಕೊಂಡು ಚುನಾವಣೆ ಎದುರಿಸುವ ರೋಡ್ ಮ್ಯಾಪ್ ರೂಪಿಸುವುದಷ್ಟೇ ನಮ್ಮ ಈಗಿನ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಂತ, ರಾಹುಲ್ ಗಾಂಧಿಯವರನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಬೇಕೆಂಬುದು ಕಾಂಗ್ರೆಸ್ನಲ್ಲಿನ ರಾಹುಲ್ ಹಿಂಬಾಲಕರ ಮನದಾಸೆ ಹೌದೆನ್ನುವುದು ಸುಳ್ಳಲ್ಲ. ಆದರೆ, ಕೇಜ್ರಿವಾಲ್, ಮಮತಾ ಈ ಹೆಸರನ್ನು ಒಪ್ಪುವ ಸಾಧ್ಯತೆ ಕಡಿಮೆ. ಬಿಹಾರ ಜೆಡಿಯು ನಾಯಕ ನಿತಿಶ್ ಕುಮಾರ್ ಕೂಡ ಪಿಎಂ ಸೀಟನ್ನು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.
2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬಯಸುವ ಪಕ್ಷಗಳಿಗಷ್ಟೇ ನಾವು ಆಹ್ವಾನ ನೀಡಿದ್ದೇವೆ. ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದ ಬಿಎಸ್ಪಿಗೆ ಆಹ್ವಾನ ಪತ್ರ ನೀಡಿ ಅದನ್ನೇಕೆ ವ್ಯರ್ಥ ಮಾಡಬೇಕು?
| ಕೆ.ಸಿ. ತ್ಯಾಗಿ
ಜೆಡಿಯು ಮುಖ್ಯ ವಕ್ತಾರ