ನ್ಯೂಸ್

Bihar Election | ಮಹಾಘಟಬಂಧನ್ ವಿಭಜಿತ ಮನೆ.. ನಿತೀಶ್ ಕುಮಾರ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

Bihar Election: ಬಿಹಾರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಎನ್‌ಡಿಎ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗುವುದು, ಅವರೇ ನಮ್ಮ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸಿಂಗ್​, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಎನ್‌ಡಿಎ ಮಿತ್ರಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಟಿಕೆಟ್​ ವಿಷಯವಾಗಿ ಇನ್ನೂ ಮಾತುಕತೆಗಳು ನಡೆಯುತ್ತಿವೆ, ಹಂಚಿಕೆ ಸೂತ್ರವನ್ನು ಅತಿ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದರು.

ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಎನ್​ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಇರಲಿದ್ದು, ನಮ್ಮ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿದೆ. ಚುನಾವಣೆಗೆ ಸೀಟು ಹಂಚಿಕೆ ಸಂಬಂಧಪಟ್ಟಂತೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ. ಆದಷ್ಟು ಬೇಗ ಎಲ್ಲರಿಗೂ ಅದು ತಿಳಿಯಲಿದೆ ಎಂದರು.

ಮಹಾಘಟಬಂಧನ್ "ವಿಭಜಿತ" ಮನೆ

ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ, ಅದನ್ನು ಕಾಂಗ್ರೆಸ್ ವರಿಷ್ಠರು ಘೋಷಿಸಬೇಕು, ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಏಕೆ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಚಿಂತಿತರಾಗಿದ್ದಾರೆ ಮತ್ತು ಭಯಭೀತರಾಗಿದ್ದಾರೆ ಎಂದರು. ಎನ್‌ಡಿಎಯ ನೀತಿ, ನಾಯಕತ್ವ ಮತ್ತು ಉದ್ದೇಶ ಎಲ್ಲವೂ ಸಿದ್ಧವಾಗಿದೆ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ, ಬಿಹಾರದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರಲ್ಲಿ ನಿತೀಶ್ ಕುಮಾರ್ ಮೊದಲಿಗರು. ಅವರ ನೇತೃತ್ವದಲ್ಲಿಯೇ ಎನ್‌ಡಿಎ ಸರ್ಕಾರ ಉತ್ತಮ ಆಡಳಿತ ಮತ್ತು ಅಭಿವೃದ್ದಿ ಯೋಜನೆಗಳ ಜಾರಿ ಆಧಾರದ ಮೇಲೆ ರಾಜ್ಯದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ಗುರಿಯನ್ನು ಹೊಂದಿದೆ ಎಂದು ಗಿರಿರಾಜ್​ ಸಿಂಗ್​ ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗ ಬಿಹಾರದಲ್ಲಿ ಎರಡು ಹಂತಗಳಲ್ಲಿ ಚುನಾವಣೆಯನ್ನು ಘೋಷಿಸಿದ್ದು, ನವೆಂಬರ್ 6 ಮತ್ತು 11 ರಂದು ಮತದಾನ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಘೋಷಣೆಯಾಗಲಿದೆ.(ಏಜೆನ್ಸೀಸ್​)