ನ್ಯೂಸ್

Bihar Election | ಮುಸ್ಲಿಂ ಮತಬುಟ್ಟಿಗೆ ಸಿಎಂ ನಿತೀಶ್​ ಗಾಳ; ವೋಟ್​ ಮಾಡುವಾಗ ನಮ್ಮ ಯೋಜನೆಗಳನ್ನು ನೆನಪು ಮಾಡಿಕೊಳ್ಳಿ ಎಂದು ಮನವಿ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ (Bihar Election) ಇಡೀ ದೇಶದ ಗಮನಸೆಳೆದಿದ್ದು, ಎರಡು ಮೈತ್ರಿಕೂಟಗಳು ನಾ ಮುಂದು ತಾ ಮುಂದು ಎಂಬಂತೆ ಪ್ರಚಾರ ಕಾರ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ನಡುವೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿರುವುದು ಮಹಾಘಟಬಂದನ್​ ನಾಯಕರ ನಿದ್ದೆ ಕೆಡಿಸಿದೆ.

ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ನಿತೀಶ್​, ಈ ಹಿಂದೆ ಆಳ್ವಿಕೆ ನಡೆಸಿದ ಸರ್ಕಾರಗಳು ಮುಸ್ಲಿಮರನ್ನು ಕೇವಲ ವೋಟ್​ಬ್ಯಾಂಕ್ ಆಗಿ ಬಳಸಿಕೊಂಡಿದ್ದು, ಆ ಸಮುದಾಯದ ಜನರ ಅಭಿವೃದ್ದಿಗಾಗಿ ಯಾವುದೇ ಯೋಜನೆಗಳನ್ನು ತಂದಿಲ್ಲ, ಅವರ ಸ್ಥಿತಿಯನ್ನು ಸುಧಾರಿಸಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮ ಎನ್​ಡಿಎ ಮತ್ತು ಆರ್​ಜೆಡಿ ಆಡಳಿತವನ್ನು ಹೋಲಿಕೆ ಮಾಡಿದ್ದು, ಮತಚಲಾಯಿಸುವಾಗ ತಮ್ಮ ಸರ್ಕಾರದ ಯೋಜನೆಗಳನ್ನು ನೆನಪಿಸಿಕೊಳ್ಳುವಂತೆ ಒತ್ತಾಯಿಸಿದರು.

2005 ಕ್ಕಿಂತ ಮೊದಲು ಆಡಳಿತ ನಡೆಸಿದ ಆರ್​ಜೆಡಿ ರಾಜ್ಯದ ಮುಸ್ಲಿಂ ಸಮುದಾಯಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ, ಅಲ್ಪಸಂಖ್ಯಾತ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿತ್ತು, ರಾಜ್ಯದ ಅನೇಕ ಕಡೆಗಳಲ್ಲಿ ಕೋಮು ಘರ್ಷಣೆಗಳು ಸರ್ವೆ ಸಾಮಾನ್ಯವಾಗಿದ್ದವು ಎಂದರು.

ಮುಸ್ಲಿಂ ಸಮುದಾಯದ ಪರ ನಿಂತಿದ್ದು ನಾನು..

2005 ರ ನವೆಂಬರ್ 24 ರಂದು ಅಧಿಕಾರ ವಹಿಸಿಕೊಂಡಾಗಿನಿಂದ ನಿತೀಶ್ ಕುಮಾರ್ ಬಿಹಾರದ ಮುಸ್ಲಿಂ ಸಮುದಾಯದ ಜನರ ಅಭಿವೃದ್ದದಿಗಾಗಿ ಕೈಗೊಂಡ ನಿರಂತರ ಪ್ರಯತ್ನಗಳನ್ನು ಈ ವೇಳೆ ಉಲ್ಲೇಖಿಸಿದರು. 2025-26ನೇ ಸಾಲಿನ ಬಜೆಟ್​ನಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅನುದಾನವನ್ನು 306 ಪಟ್ಟು ಹೆಚ್ಚಿಸಲಾಗಿದ್ದು, ಇದು 1,080.47 ಕೋಟಿ ರೂ.ಗಳಿಗೆ ತಲುಪಿದೆ ಎಂದು ಹೇಳಿದರು. ಕೋಮು ಉದ್ವಿಗ್ನತೆಯನ್ನು ತಡೆಗಟ್ಟುವ ಕ್ರಮಗಳು ಬಲಿಷ್ಠವಾಗಿದ್ದು, ಸೂಕ್ಷ್ಮ ಸ್ಮಶಾನಗಳಿಗೆ ಬೇಲಿ ಹಾಕುವ ಕಾರ್ಯ 2006 ರಲ್ಲಿ ಪ್ರಾರಂಭವಾಯಿತು ಎಂದು ಹೇಳಿದರು.

ಇಲ್ಲಿಯವರೆಗೆ, 8,000 ಕ್ಕೂ ಹೆಚ್ಚು ಸ್ಮಶಾನಗಳಿಗೆ ಬೇಲಿ ಹಾಕಲಾಗಿದ್ದು, ಸಮುದಾಯದ ಜನರೊಂದಿಗೆ ಚರ್ಚೆ ನಡೆಸಿ 1,273 ಹೆಚ್ಚುವರಿ ಸ್ಮಶಾನಗಳನ್ನು ಗುರುತಿಸಲಾಗಿದೆ, ಅದರಲ್ಲಿ 746 ಈಗಾಗಲೇ ಪೂರ್ಣಗೊಂಡಿವೆ ಮತ್ತು ಉಳಿದ ಕೆಲಸಗಳು ಶೀಘ್ರದಲ್ಲೇ ಮುಗಿಸಲಾಗುವುದು ಎಂದರು.

ಈ ಹಿಂದಿನ ಸರ್ಕಾರ ಗಲಭೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು ಮತ್ತು ಗಲಭೆಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರಿಗಾಗಿ ಏನನ್ನೂ ಮಾಡಲಿಲ್ಲ. ನಾವು ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಭಾಗಲ್ಪುರ ಕೋಮು ಗಲಭೆಯನ್ನು ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಂತ್ರಸ್ತರಿಗೆ ಪರಿಹಾರವನ್ನು ನೀಡಿದ್ದೇವೆ, ಇದಷ್ಟೆ ಅಲ್ಲದೇ ಅವರಿಗೆ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದರು. ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು, ತಾವು ಮದರಸಾಗಳನ್ನು ನೋಂದಾಯಿಸಿದ ಯೋಜನೆಗಳು, ಮುಸ್ಲಿಂ ವಿಚ್ಛೇದಿತರ ಕುಟುಂಬಕ್ಕೆ ನೆರವು ನೀಡುವ ಮೂಲಕ ಅವರ ಮಕ್ಕಳ ಶಿಕ್ಷಣಕ್ಕಾಗಿ ಜಾರಿಗೆ ತಂದ ಯೋಜನೆಗಳನ್ನು ಇದೇ ವೇಳೆ ಸ್ಮರಿಸಿಕೊಂಡರು.

ಭ್ರಮೆಯಲ್ಲಿರಬೇಡಿ...

ಮಹಾಘಟಬಂಧನ್‌ನ ಪ್ರಮುಖ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್​ನ್ನು ಪರೋಕ್ಷವಾಗಿ ಟೀಕಿಸಿದ ಸಿಎಂ ನಿತೀಶ್, ಕೆಲವರು ಮುಸ್ಲಿಂ ಸಮುದಾಯ ನಮ್ಮ ಜೊತೆ ಇದೆ ಎಂದು ಹೇಳಿಕೊಳ್ಳುತ್ತಾರೆ, ಆದರೆ, ಇದು ಕೇವಲ ಮತ ಪಡೆಯುವ ತಂತ್ರದ ಭಾಗವಷ್ಟೆ, ಇದರಿಂದ ಆ ಸಮುದಾಯದ ಜನರಿಗೆ ಯಾವುದೇ ರೀತಿಯ ಲಾಭವಿಲ್ಲ ಎಂದರು. ನೀವೆಲ್ಲರು ಯಾವುದೇ ರೀತಿಯ ಭ್ರಮೆಗಳಲ್ಲಿರಬೇಡಿ, ನಮ್ಮ ಸರ್ಕಾರ ನಿಮಗಾಗಿ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ನೆನಪಿಡಿ ಮತ್ತು ಅದರ ಆಧಾರದ ಮೇಲೆ ಯಾರಿಗೆ ಮತ ಹಾಕಬೇಕೆಂದು ಸ್ವತಃ ನೀವೇ ನಿರ್ಧರಿಸಿ ಎಂದು ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)