ನ್ಯೂಸ್

Nitish Kumar | ವಿಕಾಸ್ ಮಿತ್ರರಿಗೆ ಟ್ಯಾಬ್​​ ಖರೀದಿಸಲು 25000 ರೂಪಾಯಿ ಭತ್ಯೆ ಘೋಷಿಸಿದ ಸಿಎಂ ನಿತೀಶ್​​ ಕುಮಾರ್​!

Nitish Kumar: ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಎಸ್‌ಸಿ ಮತ್ತು ಎಸ್‌ಟಿಗಳಿಗೆ ತಲುಪಿಸಲು ಹಳ್ಳಿಗಳಲ್ಲಿ ಕೆಲಸ ಮಾಡುವ 10,000 ಕ್ಕೂ ಹೆಚ್ಚು 'ವಿಕಾಸ್ ಮಿತ್ರ'ರಿಗೆ ಟ್ಯಾಬ್ಲೆಟ್‌ಗಳನ್ನು ಖರೀದಿಸಲು ತಲಾ 25,000 ಭತ್ಯೆ ನೀಡುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ (ಸೆ 21) ಘೋಷಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿತೀಶ್​ ಕುಮಾರ್​​, ನಮ್ಮ ಸರ್ಕಾರ ಅವಕಾಶವಂಚಿತ ಸಮಾಜದ ಜನರ ಉನ್ನತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ, SC ಮತ್ತು ST ಕಲ್ಯಾಣ ಇಲಾಖೆಯಡಿಯಲ್ಲಿ ಕೆಲಸ ಮಾಡುವ 'ವಿಕಾಸ್ ಮಿತ್ರ'ರಿಗೆ ಟ್ಯಾಬ್ಲೆಟ್‌ಗಳನ್ನು ಕೊಳ್ಳಲು ಸಹಾಯ ಮಾಡುವ ಮೂಲಕ, ವಿವಿಧ ಅಭಿವೃದ್ದಿ ಯೋಜನೆಗಳ ಫಲಾನುಭವಿಗಳ ಡೇಟಾವನ್ನು ಸಂಗ್ರಹಿಸಲು ಇದು ನೆರವಾಗುತ್ತದೆ ಎಂದರು. ಅವರ ಸಾರಿಗೆ ಭತ್ಯೆಯನ್ನು ತಿಂಗಳಿಗೆ 1,900 ರೂಪಾಯಿಂದ, 2,500 ಕ್ಕೆ ಹೆಚ್ಚಿಸಲಾಗುವುದು ಮತ್ತು ಅವರ ಲೇಖನ ಸಾಮಗ್ರಿ ಭತ್ಯೆಯನ್ನು ತಿಂಗಳಿಗೆ 900ರೂಗಳಿಂದ, 1,500 ಕ್ಕೆ ಹೆಚ್ಚಿಸುವುದಾಗಿ ತಿಳಿಸಿದರು.

ಮಹಾದಲಿತ, ಅಲ್ಪಸಂಖ್ಯಾತರು ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸೇರಿದ ಮಕ್ಕಳನ್ನು ಔಪಚಾರಿಕ ಶಾಲಾ ಶಿಕ್ಷಣಕ್ಕೆ ಸಂಪರ್ಕಿಸುವ 30,000 ಕ್ಕೂ ಹೆಚ್ಚು ಶಿಕ್ಷಾ ಸೇವಕರು ಮತ್ತು ತಲಿಮಿ ಮಾರ್ಕಾಜ್‌ಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ತಲಾ 10,000 ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ. ಬೋಧನಾ ಸಾಮಗ್ರಿಗಳಿಗೆ ಪಾವತಿಸುವ ಮೊತ್ತವನ್ನು ಪ್ರತಿ ಕೇಂದ್ರಕ್ಕೆ ವರ್ಷಕ್ಕೆ 3,405 ರೂಪಾಗಿಗಳನ್ನು 6,000 ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಇದೇ ವೇಳೆ ತಿಳಿಸಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ನಿತೀಶ್​ ಕುಮಾರ್ ಈ ಘೋಷಣೆಗಳನ್ನು ಮಾಡಿದ್ದಾರೆ.(ಏಜೆನ್ಸೀಸ್​​)