ನಿಸರ್ಗ ಚಂಡಮಾರುತದ ಪರಿಣಾಮ ರಾಜ್ಯದ ಮೇಲೆ ಕೂಡ ಆಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆ, ಗಾಳಿ, ಮೋಡ ಮುಸುಕಿದ ವಾತಾವರಣ ಇದೆ. ಕರಾವಳಿ, ಮಲೆನಾಡು ಸೇರಿ ಉತ್ತರ ಕರ್ನಾಟದಕ ವಿವಿಧ ಜಿಲ್ಲೆಗಳಲ್ಲಿ ಎರಡು ದಿನಗಳ ಹಿಂದಿನಿಂದಲೇ ಮಳೆ ಶುರುವಾಗಿದೆ.
ಜಿಲ್ಲೆಯಲ್ಲಿ ಕಳೆದ 2ದಿನಗಳಿಂದಲೂ ಮಳೆಯಾಗುತ್ತಿದೆ. ನಿನ್ನೆ ಇಡೀದಿನ ಗಾಳಿಯ ಆರ್ಭಟವಿತ್ತು. ಇದು ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣ ಇದೆ.
ಮಲ್ಪೆ-ಪಡುಕೆರೆಯಲ್ಲಿ ತೀವ್ರವಾದ ಕಡಲ್ಕೊರೆತ ಉಂಟಾಗಿದೆ. ತಡೆಗೋಡೆಗಳನ್ನು ಮೀರಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ನಿನ್ನೆ ರಾತ್ರಿಯಿಂದ ಗಾಳಿ ಹೆಚ್ಚಾದಂತೆ, ಅಲೆಗಳ ಆರ್ಭಟವೂ ಹೆಚ್ಚಿದೆ.
ಪಡುಕೆರೆ ದ್ವೀಪದಲ್ಲಿ ಪ್ರತಿವರ್ಷ ಕಡಲ್ಕೊರೆತ ಸಮಸ್ಯೆ ಕಾಣಿಸುತ್ತಿದೆ. ಆದರೆ ಈ ಬಾರಿ ನಿಸರ್ಗ ಚಂಡಮಾರುತದ ಪ್ರಭಾವದಿಂದಾಗಿ ಜೂನ್ನಲ್ಲಿಯೇ ಶುರುವಾಗಿದ್ದು, ತುಸು ಹೆಚ್ಚಾಗಿಯೇ ಇದೆ. ಇದನ್ನೂ ಓದಿ: VIDEO: ಮುಂಬೈಯನ್ನು ನಲುಗಿಸುತ್ತಿದೆ ‘ನಿಸರ್ಗ’; ಎಲ್ಲ ಕಡೆ ಕಟ್ಟೆಚ್ಚರ, ಸೆಕ್ಷನ್ 144 ಜಾರಿ, ವಿಪತ್ತು ಎದುರಿಸಲು ಸಿದ್ಧತೆ
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ವೊಂದು ಮಂಗಳವಾರ ಮಧ್ಯಾಹ್ನ ಗೋವಾ ಸಮೀಪ ಸಮುದ್ರದಲ್ಲಿ ಮುಳುಗಡೆಗೊಂಡಿತ್ತು. ಅದರಲ್ಲಿದ್ದ ಏಳುಮಂದಿಯನ್ನುರ ರಕ್ಷಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸೈಕ್ಲೋನ್ ಪ್ರಭಾವದಿಂದ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದರಿಂದ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ. ಉತ್ತರ ಕನ್ನಡದಲ್ಲೂ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಎದ್ದಿರುವ ನಿಸರ್ಗ ಚಂಡಮಾರುತದಿಂದಾಗಿ ಬೆಳಗಾವಿ ನಗರ ಸೇರಿ, ಜಿಲ್ಲೆಯ ವಿವಿಧ ಕಡೆಗಳಲ್ಲಿ ಮೂರು ದಿನಗಳಿಂದ ಒಂದೇ ಸಮನೆ ಧಾರಾಕಾರ ಮಳೆಯಾಗುತ್ತಲೇ ಇದೆ.
ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ತರಕಾರಿ ಅಂಗಡಿಗಳಿಗೆ ನೀರು ನುಗ್ಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಮಹಾರಾಷ್ಟ್ರದ ಸಿಂಧುದುರ್ಗ, ರತ್ನಗಿರಿ ಜಿಲ್ಲೆಗಳಿಗೆ ನಿಸರ್ಗ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದ್ದು, ಪರಿಣಾಮವಾಗಿ ಬೆಳಗಾವಿಯಲ್ಲಿ ಸಂಜೆ ಹೊತ್ತಿಗೆ ಭಾರಿ ಮಳೆಯಾಗಬಹುದು ಎಂದು ಅಂದಾಜಿಸಿರುವ ಹವಾಮಾನ ಇಲಾಖೆ, ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಬಿರುಬೇಸಿಗೆಯಿಂದ ಕಂಗೆಟ್ಟಿದ್ದ ಬೆಳಗಾವಿ ಈಗ ತಂಪಾಗಿದ್ದರೂ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯುಂಟಾಗುವ ಭಯವೂ ಕಾಡುತ್ತಿದೆ. ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೂರ್ವ ಮುಂಗಾರು ಮಳೆ ಶುರುವಾಗಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇದ್ದು, ಎಡೆಬಿಡದೆ ಮಳೆ ಸುರಿಯುತ್ತಿದೆ. ಬಿತ್ತನೆಗೆ ಪೂರಕವಾಗಿರುವ ಮಳೆಯನ್ನು ನೋಡಿ ರೈತರು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಉತ್ತಮ ಮಳೆ ತಂದ ‘ನಿಸರ್ಗ’, ಚಂಡಮಾರುತ ಪರಿಣಾಮ
ಗದಗದಲ್ಲೂ ಸಹ ತುಂತುರು ಮಳೆ ಶುರುವಾಗಿದೆ. ಮೋಡ ಮುಸುಕುದ ಹವಾಮಾನವಿದ್ದು, ರೈತರು ಕೃಷಿ ಚಟುವಟಿಕೆ ಪ್ರಾರಂಭ ಮಾಡಿದ್ದಾರೆ.