ನ್ಯೂಸ್

ಇದು ಸ್ನೇಹಿತರ ಲಾಭಕ್ಕಾಗಿ ಮಾಡಿರುವ ಬಜೆಟ್; ರಾಹುಲ್​ಗಾಂಧಿ

ನವದೆಹಲಿ: ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ(ಜುಲೈ 23) ಸಂಸತ್ತಿನಲ್ಲಿ ಮಂಡಿಸಿದರು. ಈ ಬಜೆಟ್​​ ಅನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇವ್ ಚೇರ್ ಬಜೆಟ್ ಎಂದು ಟೀಕಿಸಿದ್ದಾರೆ.

ಇದು ಕುರ್ಚಿ ಉಳಿಸುವ ಬಜೆಟ್. ಬಜೆಟ್ ಮೂಲಕ ಮಿತ್ರಪಕ್ಷಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಬೇರೆ ರಾಜ್ಯಗಳ ವೆಚ್ಚದಲ್ಲಿ ಅವರನ್ನು ಮೆಚ್ಚಿಸುವ ಪ್ರಯತ್ನ ನಡೆದಿದೆ. ಬಜೆಟ್ ಮೂಲಕ ಅವರ ಸ್ನೇಹಿತರನ್ನು ಸಂತೋಷಪಡಿಸಲಾಗಿದೆ ಎಂದು ರಾಹುಲ್​ಗಾಂಧಿ ಹೇಳಿದರು. ಈ ಬಜೆಟ್​ನಿಂದ ಎಎ (ಅದಾನಿ-ಅಂಬಾನಿ)ಗೆ ಲಾಭ ಆದರೆ ಸಾಮಾನ್ಯ ಭಾರತೀಯರಿಗೆ ಯಾವುದೇ ಪರಿಹಾರವಿಲ್ಲ ಎಂದು ಹೇಳಿದರು.

ಈ ಬಜೆಟ್​ನಲ್ಲಿನ ಮೂರನೇ ಅಂಶವನ್ನು ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆಯಿಂದ ನಕಲು ಮಾಡಲಾಗಿದೆ ಮತ್ತು ಹಿಂದಿನ ಬಜೆಟ್​​ನ ಅಂಶವನ್ನು ಕಾಪಿ ಪೇಸ್ಟ್​​​ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಇನ್ನು ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಪಿಕ್ಯಾಟ್​ ಬಜೆಟ್​ ಎಂದು ಹೇಳಿದ್ದಾರೆ. ಕಾಂಗ್ರೆಸ್​ನ ನ್ಯಾಯದ ಅಜೆಂಡಾವನ್ನು ಸರಿಯಾಗಿ ನಕಲು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​​​)