ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪೂರ್ವ ಭಾಷಣ ಪ್ರಾರಂಭದಲ್ಲಿ ಮಾಜಿ ವಿತ್ತೀಯ ಸಚಿವ, ದಿವಂಗತ ಅರುಣ್ ಜೇಟ್ಲಿ ಅವರಿಗೆ ಗೌರವ ಸಲ್ಲಿಸಿದರು.
ಮೋದಿ ನೇತೃತ್ವದ ಮೊದಲ ಅವಧಿಯ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ 2019ರ ಆಗಸ್ಟ್ 24ರಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಇಂದು ಬಜೆಟ್ ಅಧಿವೇಶನ ಪ್ರಾರಂಭದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿ ಹೇಳಿದರು. ಈ ವೇಳೆ ಅರುಣ್ ಜೇಟ್ಲಿ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಜಿಎಸ್ಟಿ (ಗೂಡ್ಸ್ ಆ್ಯಂಡ್ ಸರ್ವೀಸ್ ಟ್ಯಾಕ್ಸ್-ಸರಕು ಮತ್ತು ಸೇವಾ ತೆರಿಗೆ)ಯನ್ನು ಅತ್ಯಂತ ಮಹತ್ವದ ಐತಿಹಾಸಿಕ ಸುಧಾರಣಾ ಕ್ರಮ ಎಂದು ಹೊಗಳಿದರು. ಅದೇ ವೇಳೆ ಅರುಣ್ ಜೇಟ್ಲಿಯವರನ್ನು ನೆನಪು ಮಾಡಿಕೊಂಡು, ನಾನು ಈ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಸರ್ಕಾರದ ಎರಡನೇ ಅವಧಿಯ ಎರಡನೇ ಬಜೆಟ್ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿದ್ದು, ಸದ್ಯದ ಆರ್ಥಿಕ ಕುಸಿತದ ಪರಿಸ್ಥಿತಿಯಲ್ಲಿ ಈ ಬಜೆಟ್ ಅಧಿಕ ನಿರೀಕ್ಷೆ, ಕುತೂಹಲ ಹುಟ್ಟಿಸಿದೆ. (ಏಜೆನ್ಸೀಸ್)