ನ್ಯೂಸ್

ನಿರ್ಮಲಾ ಸೀತಾರಾಮನ್ ಹಿಂದೆಯೂ ಸುಳ್ಳು ಹೇಳಿದ್ದರು ಈಗಲೂ ಸುಳ್ಳು ಹೇಳಿದ್ದಾರೆ

ಮೈಸೂರು: ನಿರ್ಮಲಾ ಸೀತಾರಾಮನ್ ಹಿಂದೆಯೂ ಸುಳ್ಳು ಹೇಳಿದ್ದರು ಈಗಲೂ ಸುಳ್ಳು ಹೇಳಿದ್ದಾರೆ. ರಾಜ್ಯಕ್ಕೆ ಏನೂ ಕೊಡದೆ ಅನ್ಯಾಯವಾಗಿಲ್ಲ ಎಂದರೆ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಅನ್ಯಾಯವಾಗಿಲ್ಲ ಎಂದಿದ್ದಾರೆ. ಬಜೆಟ್ ಮೀಟಿಂಗ್ ಕರೆದಾಗ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ನೀಡುವುದಾಗಿ ಘೋಷಣೆ ಮಾಡಿದ್ದು, ಅದನ್ನು ಕೊಡಿ ಎಂದು ಕೋರಿದ್ದೆವು. ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವಿಲ್ಲ. 15 ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ 5495 ಕೋಟಿ ರೂ.ವಿಶೇಷ ಅನುದಾನವನ್ನೂ ಕೊಟ್ಟಿಲ್ಲ. ಪೇರಿಫೇರಲ್ ರಿಂಗ್ ರೋಡ್‌ಗೆ 3000ಕೋಟಿ ಕೊಡುವುದಾಗಿ ಹೇಳಿದ್ದೂ ಇಲ್ಲ. 3000 ಕೋಟಿರೂ. ಕೆರೆಗಳ ಅಭಿವೃದ್ಧಿಗೆ ಕೊಡುವುದಾಗಿ ಹೇಳಿದ್ದರು. ಅದೂ ಕೂಡ ಬಜೆಟ್ ನಲ್ಲಿ ಇಲ್ಲ. ಇದು ಅನ್ಯಾಯವಲ್ಲವೇ..?ಆಂಧ್ರ, ಬಿಹಾರ ರಾಜ್ಯಗಳಿಗೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ ಅನುದಾನವನ್ನು ನಾವು ಕೂಡಿಸುತ್ತೇವೆ ಎಂದು ಪ್ರಸ್ತಾಪ ಮಾಡಬಹುದಿತ್ತು. ಕೇಂದ್ರ ಸಚಿವರ ಕ್ಷೇತ್ರ ರಾಮನಗರಕ್ಕೂ ಏನಾದರೂ ಹೊಸದು ಯೋಜನೆ ಬಂದಿದೆಯೇ? ಕೈಗಾರಿಕಾ ಕಾರಿಡಾರ್ ಬಂದಿದೆಯೇ? ಮೇಕೆದಾಟು, ಕೈಗಾರಿಕೆ ಹಾಗೂ ಕೇಳಿದ ಅನುದಾನ ಕೊಟ್ಟಿಲ್ಲ. ರಾಯಚೂರಿಗೆ ಏಮ್ಸ್ ಸ್ಥಾಪಿಸುವಂತೆ ಕೋರಿದ್ದೆವು. ಆದರೆ ಯಾವುದೇ ಪ್ರಸ್ತಾಪವಾಗಿಲ್ಲ. ಮೈಸೂರು ಅಥವಾ ಹಾಸನಕ್ಕೆ ಐ ಐ ಟಿ ಮಂಜೂರು ಮಾಡಲು ಮನವಿ ಮಾಡಿದ್ದೆವು ಅದೂ ಕೂಡ ಆಗಿಲ್ಲ. ಹಾಗಾದರೆ ಅನ್ಯಾಯವಾಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕದ ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಕರ್ನಾಟಕ ಭ್ರಷ್ಟ ರಾಜ್ಯ ಎಂದು ಅವರು ಮಸಿ ಬಳಿಯುತ್ತಿದ್ದಾರೆ. ಕರ್ನಾಟಕ ಭ್ರಷ್ಟ ರಾಜ್ಯವಲ್ಲ. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ ಎಂದರು.