ನ್ಯೂಸ್

Nirmala Sitharaman | ಭಾರತಕ್ಕೆ ಉತ್ತಮ ವಿರೋಧ ಪಕ್ಷದ ನಾಯಕರ ಅಗತ್ಯವಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​!

Nirmala Sitharaman: ಭಾರತಕ್ಕೆ ಉತ್ತಮ ವಿರೋಧ ಪಕ್ಷ ಮತ್ತು ಉತ್ತಮ ವಿರೋಧ ಪಕ್ಷದ ನಾಯಕರ ಅವಶ್ಯಕತೆ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ(ಸೆಪ್ಟೆಂಬರ್​​ 7) ಹೇಳಿದ್ದಾರೆ. ಜಿಎಸ್‌ಟಿ ಸುಧಾರಣೆಗಳ ಕುರಿತು ಮೋದಿ ಸರ್ಕಾರದ ವಿರುದ್ಧ ವಿರುದ್ಧದ ಟೀಕೆಗಳು ಅಜ್ಞಾನದಿಂದ ಕೂಡಿವೆ ಎಂದಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿತ್ತ ಸಚಿವೆ, ಜಿಎಸ್‌ಟಿ ಪರಿಚಯಿಸಿದಾಗ ನಾಲ್ಕು ತೆರಿಗೆ ಹಂತಗಳನ್ನು ಉಳಿಸಿಕೊಂಡಿದ್ದಕ್ಕಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎಂದರು.

2017 ರ ಜುಲೈನಲ್ಲಿ ಜಿಎಸ್​ಟಿ ಅನುಷ್ಠಾನಕ್ಕೆ ಮುಂಚಿತವಾಗಿ ಬಿಜೇಪಿಯೇತರ ಪಕ್ಷಗಳ ಆಡಳಿತದ ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸಿದ ನಾಲ್ಕು ಜಿಎಸ್‌ಟಿ ದರಗಳ ವಿಕಸನವನ್ನು ವಿವರಿಸಿದ ಸೀತಾರಾಮನ್, ಇದು ಕೇವಲ ಬಿಜೆಪಿಯ ಅಥವಾ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿರ್ಧಾರವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಮರ ಕಡಿಯುವಂತಹ ವಿಷಯಗಳ ವಿರುದ್ಧ ಸಾರ್ವಜನಿಕ ಚಳುವಳಿಯ ರೀತಿಯಲ್ಲಿ ದೇಶಕ್ಕೆ ಉತ್ತಮ ವಿರೋಧ ಪಕ್ಷ ಮತ್ತು ಪ್ರಬುದ್ಧ ವಿರೋಧ ಪಕ್ಷದ ನಾಯಕರಿಗಾಗಿ ಅಭಿಯಾನದ ಅಗತ್ಯವಿದೆ ಎಂದು ಹೇಳಿದರು.

ಪರೋಕ್ಷ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಂವಿಧಾನಿಕ ಸಂಸ್ಥೆಯಾದ ಜಿಎಸ್‌ಟಿ ಮಂಡಳಿಯನ್ನು ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಉಲ್ಲೇಖಿಸುವ ಮೂಲಕ ದುರ್ಬಲಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಟೀಕೆಯನ್ನು ತಳ್ಳಿಹಾಕಿದ ಹಣಕಾಸು ಸಚಿವರು, ದೇಶದ ಪ್ರಧಾನ ಮಂತ್ರಿಯಾಗಿ ಮೋದಿ ಸುಧಾರಣೆಗಳ ಬಗ್ಗೆ ದೇಶಕ್ಕೆ ಸಂದೇಶ ನೀಡಿರುವುದರಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸಿದರು. ನಿಮಗೆ ವಿಷಯ ಅರ್ಥವಾಗದಿದ್ದರೆ ಮೌನವಾಗಿರುವುದು ಉತ್ತಮ ಎಂದು ಸಲಹೆ ನೀಡಿದರು.

ಇತ್ತೀಚೆಗೆ ಜಾರಿಗೆ ತಂದಿರುವ ಜಿಎಸ್​​ಟಿ ಸುಧಾರಣೆ ನೀತಿಗಳು ಭಾರತದ ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವಂತೆ ತೆರಿಗೆ ಸ್ಲ್ಯಾಬ್‌ಗಳನ್ನು ಶೇ. 5 ಮತ್ತು ಶೇ. 18 ಕ್ಕೆ ಸೀಮಿತಗೊಳಿಸಲು ಮತ್ತು ಶೇ. 12 ಮತ್ತು ಶೇ. 28 ರ ಎರಡು ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ಜಿಎಸ್‌ಟಿ ಕೌನ್ಸಿಲ್ ಸೆಪ್ಟೆಂಬರ್ 2 ರಂದು ಅನುಮೋದನೆ ನೀಡಿತ್ತು.(ಏಜೆನ್ಸೀಸ್​​)