ಬೆಂಗಳೂರು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ಸೋಮವಾರ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಮತ್ತು ರಾಷ್ಟ್ರೀಯ ಶ್ರೇಯಾಂಕ ಚೌಕಟ್ಟು ಸಂಸ್ಥೆಯು (ಎನ್‌ಐಆರ್‌ಎಫ್) ನಡೆಸಿದ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.
ದೇಶದ ಟಾಪ್ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಶೇ.83.29 ಅಂಕಗಳನ್ನು ಪಡೆಯುವ ಮೂಲಕ ಸಂಶೋಧನಾ ವಿಭಾಗದಲ್ಲಿ ಪ್ರಥಮ ಹಾಗೂ ಒಟ್ಟಾರೆ ವಿಭಾಗದಲ್ಲಿ ದ್ವಿತೀಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ರಾಜ್ಯದ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ಅದೇ ರೀತಿ ಕಾನೂನು ವಿಭಾಗದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆ್ ಇಂಡಿಯಾ ಯೂನಿವರ್ಸಿಟಿ ಮೊದಲ ಸ್ಥಾನದಲ್ಲಿದೆ. ನಿರ್ವಹಣೆಯಲ್ಲಿ ಐಐಎಂಬಿ ಎರಡನೇ ಸ್ಥಾನ ಪಡೆದುಕೊಂಡಿದೆ. ವೈದ್ಯಕೀಯ ವಿಭಾಗದಲ್ಲಿ ನಿಮ್ಹಾನ್ಸ್ 4ನೇ ರ‌್ಯಾಂಕ್ ಪಡೆದಿದೆ.
ಒಟ್ಟಾರೆ ವಿಭಾಗದಲ್ಲಿ ಐಐಎಸ್‌ಸಿ ದ್ವಿತೀಯ, ಮಣಿಪಾಲ ಅಕಾಡೆಮಿ ಆ್ ಹೈಯರ್ ಎಜುಕೇಶನ್- 14, ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿ 36, ಎನ್‌ಐಟಿ ಸುರತ್ಕಲ್-46, ಮೈಸೂರು ವಿವಿ 86 ಮತ್ತು ಕ್ರೈಸ್ಟ್ ವಿವಿ 90 ಸ್ಥಾನ ಪಡೆದಿವೆ.
ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಮೈಸೂರು ವಿವಿಯು 19, ವಿಟಿಯು 22, ಬೆಂಗಳೂರು ವಿವಿ 24 ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ 44ನೇ ರ‌್ಯಾಂಕ್ ಪಡೆದಿದೆ.
ವಿಶ್ವವಿದ್ಯಾಲಯ ವಿಭಾಗದಲ್ಲಿ ಮೈಸೂರು ವಿವಿ 54 (ಶೇ.51.04), ಬೆಳಗಾವಿಯ ವಿಟಿಯು 75 (ಶೇ.48.10), ಬೆಂಗಳೂರು ವಿವಿ 81 (ಶೇ.47.45) ಮತ್ತು ಬೆಂಗಳೂರಿನ ಕೃಷಿ ವಿವಿಯು 90ನೇ (ಶೇ.46.474)ಸ್ಥಾನ ಪಡೆದಿವೆ.