ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರು ಪ್ರಮುಖ ಅಪರಾಧಿಗಳಲ್ಲಿ ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ಮಧ್ಯಾಹ್ನ ವಜಾಗೊಳಿಸಿದೆ.
ಅಪರಾಧಿಗಳಾದ ವಿನಯ್ ಶರ್ಮಾ(26) ಮತ್ತು ಮುಕೇಶ್ ಕುಮಾರ್(32) ಎಂಬುವರು ಕ್ಯುರೇಟಿವ್ ಅರ್ಜಿಯನ್ನು ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪಂಚ ಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ಪಂಚ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅರುಣ್ ಮಿಶ್ರಾ, ಆರ್.ಅಫ್.ನಾರಿಮನ್, ಆರ್.ಬಾನುಮತಿ ಮತ್ತು ಅಶೋಕ್ ಭೂಷಣ್ ಇದ್ದರು. 2017ರಲ್ಲಿ ನಿರ್ಭಯಾ ಗ್ಯಾಂಗ್ರೇಪ್ ಮತ್ತು ಕೊಲೆ ಪ್ರಕರಣವನ್ನು ಅಪರಾಧವನ್ನು ಎತ್ತಿಹಿಡಿದು, ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಖಚಿತಪಡಿಸಿದ ಸುಪ್ರೀಂಕೋರ್ಟ್ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಾನುಮತಿ ಮತ್ತು ಅಶೋಕ್ ಭೂಷಣ್ ಕೂಡ ಭಾಗವಾಗಿದ್ದರು.
ಅಪರಾಧಿಗಳಾದ ವಿನಯ್ ಶರ್ಮಾ(26) ಮತ್ತು ಮುಕೇಶ್ ಕುಮಾರ್(32) ಅವರನ್ನು ಬಿಟ್ಟರೆ, ಇನ್ನಿಬ್ಬರು ಅಪರಾಧಿಗಳಾದ ಅಕ್ಷಯ್ ಕುಮಾರ್ ಸಿಂಗ್(31) ಮತ್ತು ಪವನ್ ಗುಪ್ತ(25) ಈವರೆಗೂ ಕಾನೂನಿನ ಅಡಿಯಲ್ಲಿ ಇರುವ ಕೊನೆಯ ಅವಕಾಶವಾದ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿಲ್ಲ.
ನಾಲ್ವರು ಅಪರಾಧಿಗಳು ಈ ಹಿಂದೆ ಮರುಪರಿಶೀಲನಾ ಅರ್ಜಿಯನ್ನು ದಾಖಲಿಸಿದ್ದರು. ಆದರೆ, ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಸದ್ಯ ಕಾನೂನಿ ಅಡಿಯಲ್ಲಿ ಇರುವ ಕೊನೆಯ ಅವಕಾಶವಾದ ಕ್ಯುರೇಟಿವ್ ಅರ್ಜಿಯೂ ಕೂಡ ತಿರಸ್ಕೃತವಾಗಿದ್ದು, ಆರೋಪಿಗಳಿಗೆ ಉಳಿದಿರುವ ಇನ್ನೊಂದು ಮಾರ್ಗವೆಂದರೆ ಅದು ರಾಷ್ಟ್ರಪತಿಗಳ ಕ್ಷಮಾಧಾನವಾಗಿದೆ. ಆದರೆ ಈ ಪ್ರಕರಣದಲ್ಲಿ ಅದು ದೊರಕುವ ಸಾಧ್ಯತೆಯೇ ಇಲ್ಲ. ಏಕೆಂದರೆ ಹೈದರಾಬಾದ್ ಪಶುವೈದ್ಯಾಧಿಕಾರಿ ಗ್ಯಾಂಗ್ರೇಪ್ ಮತ್ತು ಕೊಲೆ ಪ್ರಕರಣದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅತ್ಯಾಚಾರಿಗಳಿಗೆ ಇನ್ನು ಮುಂದೆ ಕ್ಷಮೆಯೇ ಇಲ್ಲವೆಂದಿದ್ದರು.
ಮರಣದಂಡನೆಗೆ ದೆಹಲಿ ನ್ಯಾಯಾಯಲಯ ಡೆತ್ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಇಬ್ಬರು ಅಪರಾಧಿಗಳು ಸುಪ್ರೀಂಕೋರ್ಟ್ನಲ್ಲಿ ಕ್ಯುರೇಟಿವ್ ಅರ್ಜಿ ದಾಖಲಿಸಿದ್ದರು. ಆದರೆ, ಅರ್ಜಿ ತಿರಸ್ಕಾರವಾಗಿದ್ದು, ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳನ್ನು ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗುತ್ತದೆ. (ಏಜೆನ್ಸೀಸ್)