ನ್ಯೂಸ್

ನಿರ್ಭಯಾ ಕೇಸ್: ವಿಳಂಬ ತಂತ್ರದ ವಿಚಾರವಾಗಿ ಅಪರಾಧಿಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಕೋರ್ಟ್​ನಿಂದ ವಕೀಲರ ನೆರವಿನ ಆಫರ್

ನವದೆಹಲಿ: ನಿರ್ಭಯಾ ಗ್ಯಾಂಗ್​ ರೇಪ್ ಮತ್ತು ಹತ್ಯೆ ಪ್ರಕರಣದ ಅಪರಾಧಿ ಅನುಸರಿಸುತ್ತಿರುವ ವಿಳಂಬ ತಂತ್ರದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಕೋರ್ಟ್ ಆತನನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಕಾನೂನು ಕ್ರಮ ತ್ವರಿತವಾಗಿ ಜರುಗಿಸುವುದಕ್ಕಾಗಿ ವಕೀಲರ ನೆರವನ್ನೂ ನೀಡುವುದಾಗಿ ಹೇಳಿತು.

ಹೆಚ್ಚುವರಿ ಸೆಷನ್ಸ್ ಜಡ್ಜ್​ ಧರ್ಮೇಂದ್ರ ರಾಣಾ, ಇದು ನ್ಯಾಯಯುತವಾದುದಲ್ಲ. ನೀನು ಈ ರೀತಿ ವಿಳಂಬಿಸುವುದು ಸರಿಯಲ್ಲ. ಪ್ರಕರಣವನ್ನು ಇನ್ನಷ್ಟು ವಿಳಂಬಿಸುತ್ತಿದ್ದೀಯ.. ನಿನಗೊಬ್ಬ ವಕೀಲನ ನೆರವು ಒದಗಿಸಲು ನಾನು ಬಾಧ್ಯಸ್ಥನಾಗಿದ್ದೇನೆ. ಇದು ಬಹಳ ಗಂಭೀರವಾದ ಪ್ರಕರಣವಾಗಿದ್ದು, ನೀನು ವಕೀಲನ ನೆರವು ಪಡೆಯಬೇಕು ಎಂದು ಹೇಳಿದರು.

ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ನಾಲ್ವರು ಅಪರಾಧಿಗಳ ಪೈಕಿ ಪವನ್​ ವಿಚಾರವಾಗಿ ನ್ಯಾಯಾಧೀಶರು ಈ ರೀತಿ ಆಕ್ರೋಶದಿಂದ ನುಡಿದಿರುವಂಥದ್ದು. ಪವನ್​ ತಂದೆ ಕೋರ್ಟ್​ನಲ್ಲಿ ಹೇಳಿಕೆ ನೀಡಿದ್ದು, ವಕೀಲರು ಬೇಡ ಎಂದು ತಾನೇ ಹೇಳಿದ್ದು, ಸರ್ಕಾರಿ ವಕೀಲರ ಅಗತ್ಯ ವಿಲ್ಲ ಎಂದಿದ್ದನ್ನೂ ಗಮನಕ್ಕೆ ತಂದರು. ಇದಕ್ಕೆ ಪ್ರತಿಯಾಗಿ ಕೋರ್ಟ್​ ಆಕ್ರೋಶ ವ್ಯಕ್ತಪಡಿಸಿತು.

ಕೂಡಲೇ ಪವನ್ ತಂದೆ, ಎರಡು ಮೂರು ದಿನಗಳ ಕಾಲಾವಕಾಶ ಕೊಡಿ. ವಕೀಲರನ್ನು ನೇಮಿಸಿಕೊಳ್ಳುತ್ತೇವೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ನಾಲ್ವರ ಪೈಕಿ ಪವನ್ ಒಬ್ಬನೇ ಇನ್ನೂ ಕ್ಯುರೇಟಿವ್ ಪಿಟಿಷನ್ ಸಲ್ಲಿಸಿಲ್ಲ. ಆತನಿಗೆ ಇರುವ ದಯಾ ಅರ್ಜಿ ಮತ್ತು ಇತರೆ ಕಾನೂನು ನೆರವುಗಳು ಹಾಗೆಯೇ ಬಾಕಿ ಇವೆ. (ಏಜೆನ್ಸೀಸ್)