ನ್ಯೂಸ್

ಜೆಡಿಎಸ್‌ನಲ್ಲಿ ನಿಖಿಲ್ ಗೆಲ್ಲುವ ನಿರೀಕ್ಷೆ

Bengaluru - Political - Vilas Melagiri

ಬೆಂಗಳೂರು: ಹೈಪ್ರೊೈಲ್, ಹೈ ಟೆನ್ಶ್‌ನ್ ಕ್ಷೇತ್ರವಾಗಿದ್ದ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಮುಗಿದಿದೆ. ಗೆಲುವಿನ ಲೆಕ್ಕಾಚಾರದ ವಿಶ್ಲೇಷಣೆ ಶುರುವಾಗಿದೆ. ಕ್ಷೇತ್ರದಲ್ಲಿ ಭರ್ಜರಿ ಬೆಟ್ಟಿಂಗ್ ಕೂಡ ನಡೆಯುತ್ತಿದೆ.

ಜೆಡಿಎಸ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ನಿರೀಕ್ಷೆ (Nikhil is expected to win in JDS) ಹೆಚ್ಚಿದ್ದು ಹುಮ್ಮಸ್ಸು ಮೂಡಿಸಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಗನ ಗೆಲುವಿನ ಭರವಸೆಯಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಂಡ ಗತ್ತಿನಲ್ಲಿ ಜೆಡಿಎಸ್ ಇದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮ್ಮ 92ನೇ ವಯಸ್ಸಿನಲ್ಲೂ ಏಳು ದಿನ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಕ್ಯಾಂಪೇನ್ ಮಾಡಿದರು. ಸಣ್ಣ ವಿವಾದವೂ ಇಲ್ಲದೇ ಚುನಾವಣಾ ಪ್ರಚಾರ ನಡೆಸಿದರು. ಇದಕ್ಕೆ ಬಿಜೆಪಿ ಕೂಡ ಸಾಥ್ ಕೊಟ್ಟಿತು.

ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಮೆಸೇಜ್ ಕೊಡುವ ಉದ್ದೇಶವನ್ನು ಎನ್‌ಡಿಎ ನಾಯಕರು ಇಟ್ಟುಕೊಂಡಿದ್ದರು. ಈ ವಿಷಯದಲ್ಲಿ ಜೆಡಿಎಸ್, ಬಿಜೆಪಿ ಸಕ್ಸಸ್ ಆಗಿದೆ ಎಂಬ ಲೆಕ್ಕಾಚಾರವಿದೆ. ಶೇಕಡಾವಾರು ಮತ, ಬೂತ್ ಲೆಕ್ಕಾಚಾರ ನೋಡಿ ನಿಖಿಲ್ ಗೆಲ್ಲುವ ಆಶಾಭಾವನೆಯಲ್ಲಿ ಜೆಡಿಎಸ್ ಇದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾತುಗಳು ನಿಖಿಲ್ ಗೆಲ್ಲುವ ವಿಶ್ವಾಸಕ್ಕೆ ಪುಷ್ಟಿ ನೀಡುವಂತಿವೆ.

ಮತದಾನ ಮುಗಿದು ಎರಡು ಮೂರು ದಿನ ಕಳೆದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಲಿತಾಂಶದ ಬಗ್ಗೆ ಯಾವುದೇ ರಿಯಾಕ್ಟ್ ಮಾಡಿಲ್ಲ. ಸಿಎಂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರೂ ಅದು ಆ ಸ್ಥಾನದಲ್ಲಿ ನಿಂತು ಆಡಲೇಬೇಕಾದ ಮಾತು ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತದೆ.

ಕರಿಯ ಪದದ ಕರಾಳ ಛಾಯೆ

ಡಿಸಿಎಂ ಡಿ.ಕೆ.ಶಿವಕುಮಾರ್ ಆರು ತಿಂಗಳಿಂದ ಕ್ಷೇತ್ರದಲ್ಲಿ ಮಾಡಿದ ಕೆಲಸ, ಭರ್ಜರಿ ಪ್ರಚಾರ, ಅತಿಯಾದ ವಿಶ್ವಾಸ ಸಚಿವ ಜಮೀರ್ ಅಹ್ಮದ್ ಆಡಿದ ಒಂದು ಮಾತಿನಿಂದ ಕಳೆದು ಹೋದಂತಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ಕರೆದದ್ದು ಯೋಗೇಶ್ವರ್ ಗೆಲುವಿಗೆ ಅಡ್ಡಿಯಾಗಿದೆ ಎಂಬ ಮಾತು ಈಗ ಸ್ವ ಪಕ್ಷದಲ್ಲೇ ಕೇಳಿ ಬರುತ್ತಿದೆ.

ಜಮೀರ್ ಹೇಳಿಕೆ ಮುಸ್ಲಿಂ ಮತ ಧೃವೀಕರಣ ಆಗುತ್ತದೆ ಎಂದು ಕೊಂಡಿದ್ದ ಕಾಂಗ್ರೆಸ್‌ಗೆ ಚುನಾವಣೋತ್ತರ ಸಮೀಕ್ಷೆ ತಲೆಕೆಳಗು ಮಾಡಿದೆ.

ಜಮೀರ್ ಹೇಳಿಕೆಯಿಂದ ಒಕ್ಕಲಿಗರು ಎನ್ ಮಾಸ್ ಆಗಿ ನಿಖಿಲ್ ಕುಮಾರಸ್ವಾಮಿಗೆ ಮತ ಚಲಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬೆಳವಣಿಗೆಯಿಂದ ಜೆಡಿಎಸ್‌ನಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಮೈಸೂರು ಭಾಗದಲ್ಲಿ ಪಕ್ಷಕ್ಕೆ ಬೂಸ್ಟ್ ಬರಲಿದೆ ಎಂಬ ಭರವಸೆ ಜೆಡಿಎಸ್‌ನಲ್ಲಿ ಮೂಡಿದೆ.

ಜಮೀರ್ ಹೇಳಿಕೆ ನಿರ್ಲಕ್ಷ್ಯ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟೇ ಪ್ರವೋಕ್ ಮಾಡಿದರೂ ಜೆಡಿಎಸ್ ನಾಯಕರು ರಿಯಾಕ್ಟ್ ಮಾಡಲಿಲ್ಲ. ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡಿ ಮೈ ಬಣ್ಣದ ಬಗ್ಗೆ ಮಾತನಾಡಿದರೂ ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಆದರೆ ಮತದಾರರು ಅದಲ್ಲೂ ಒಕ್ಕಲಿಗ ಮತದಾರರು ಆ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆನ್ನಲಾಗಿದೆ. ಯೋಗೇಶ್ವರ್ ಹೇಳಿಕೆ ಅದನ್ನು ದೃಢಪಡಿಸುತ್ತಿದೆ.

ಯಡಿಯೂರಪ್ಪ, ವಿಜಯೇಂದ್ರ ಸಾಥ್

ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೂಡ ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷೆಗೂ ಮೀರಿ ಸಾಥ್ ಕೊಟ್ಟರು. ಕ್ಷೇತ್ರದಲ್ಲಿನ ಲಿಂಗಾಯತ ಮತ ಕ್ರೋಢೀಕರಣದಲ್ಲಿ ಯಡಿಯೂರಪ್ಪ ಮಹತ್ವದ ಪಾತ್ರ ವಹಿಸಿದರು ಎಂದು ಜೆಡಿಎಸ್ ನಾಯಕರೇ ಹೇಳುತ್ತಾರೆ.

ಲಿಂಗಾಯತ-ಒಕ್ಕಲಿಗ ಸಮುದಾಯಗಳು ಒಗ್ಗಟ್ಟಾದರೆ ರಾಜಕೀಯ ದಿಕ್ಕನ್ನೇ ಬದಲಿಸಬಹುದು ಎಂಬ ಸಂದೇಶವನ್ನು ಈ ಚುನಾವಣೆ ಮೂಲಕ ಎನ್‌ಡಿಎ ನಾಯಕರು ಸಾರಿದರು. ಚನ್ನಪಟ್ಟಣ ಚುನಾವಣೆ ಎನ್‌ಡಿಎಯಲ್ಲಿ ಹೊಸ ಚೈತನ್ಯ ಮೂಡಿಸಿದರೆ ಕಾಂಗ್ರೆಸ್‌ನಲ್ಲಿ ಮಂಕು ಕವಿಯುವಂತೆ ಮಾಡಿದೆ.