ಮಹಾರಾಷ್ಟ್ರದ ಎನ್ಸಿಪಿ ನಾಯಕ, ಮಾಜಿ ಸಚಿವ ಬಾಬಾ ಸಿದ್ದಿಕಿಯವರನ್ನು ಹತ್ಯೆ ಮಾಡಿದ್ದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಒಡನಾಡಿಗಳೇ ಎಂದು ಗ್ಯಾಂಗ್ ಸದಸ್ಯ ಶುಬು ಲೋಂಕರ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದ ಬೆನ್ನಲ್ಲೇ ಮುಂಬೈ ಪೊಲೀಸರು ಕೂಡ ಈ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಅಂತಾರಾಷ್ಟ್ರೀಯ ಸ್ತರದಲ್ಲೂ ಸದ್ದು ಮಾಡುತ್ತಿದ್ದು, ಭಾರತ ಸರ್ಕಾರ ಬಿಷ್ಣೋಯ್ ಗ್ಯಾಂಗ್ ಬಳಸಿಕೊಂಡು ಕೆನಡಾದಲ್ಲಿ ದಾಳಿಗಳನ್ನು ನಡೆಸಿದೆ ಎಂಬ ಆರೋಪ ಕೆನಡಾ ಸರ್ಕಾರ ಮಾಡಿದೆ. ಭಾರತ ಈ ಆರೋಪಗಳನ್ನು ತಳ್ಳಿಹಾಕಿದ್ದು, ರಾಜಕೀಯ ಲಾಭಕ್ಕಾಗಿ ಕೆನಡಾ ಭಾರತದ ಮೇಲೆ ಗೂಬೆ ಕೂರಿಸುತ್ತಿದೆ ಎಂದಿದೆ. ಈ ವಿದ್ಯಮಾನವನ್ನು ವಿವರಿಸಿದ್ದಾರೆ ನವದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ.
ಮೂಲತಃ ಪಂಜಾಬಿನವನಾದ ಲಾರೆನ್ಸ್ ಬಿಷ್ಣೋಯ್ ಕೆನಡಾದಲ್ಲೂ ತನ್ನ ಜಾಲಗಳನ್ನು ವಿಸ್ತರಿಸಿಕೊಂಡಿರುವುದು ಗುಟ್ಟಿನ ವಿಷಯವೇನಲ್ಲ. ಏಕೆಂದರೆ, ಬಿಷ್ಣೋಯ್ಗೆ ಅತ್ಯಾಪ್ತನಾಗಿರುವ ಮತ್ತೋರ್ವ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಕೆನಡಾ, ಅಮೆರಿಕದಲ್ಲಿ ಕುಳಿತುಕೊಂಡೇ ಕೊಲೆ, ಹತ್ಯೆ, ಸುಲಿಗೆಯಂತಹ ಅವ್ಯವಹಾರಗಳನ್ನು ಆಪರೇಟ್ ಮಾಡುತ್ತಿದ್ದಾನೆ. ಸದ್ಯ ಅಮೆರಿಕದಲ್ಲಿದ್ದಾನೆ ಎನ್ನಲಾಗಿದೆ. ‘2022ರಲ್ಲಿ ಪಂಜಾಬ್ನ ಮಾನ್ಸಾದಲ್ಲಿ ಜನಪ್ರಿಯ ಗಾಯಕ ಸಿಧು ಮೂಸೆವಾಲಾನನ್ನು ನಾನೇ ಕೊಂದಿದ್ದು’ ಎಂದು ಸತ್ವಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಹೇಳಿಕೊಂಡಿದ್ದ.
ಕೇಂದ್ರ ಗೃಹ ಸಚಿವಾಲಯ ಗೋಲ್ಡಿ ಬ್ರಾರ್ನನ್ನು ಭಯೋತ್ಪಾದಕ ಎಂದು ಗುರುತಿಸಿದೆ. ಆತನ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ 54 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 24 ಕೇಸುಗಳು ಸುಲಿಗೆಗೆ ಸಂಬಂಧಿಸಿದ್ದಾಗಿದೆ. ಅಂದಿನಿಂದಲೂ ಬಿಷ್ಣೋಯ್, ಗೋಲ್ಡಿ ಬ್ರಾರ್ ಆಗಾಗ್ಗೆ ಸುದ್ದಿಯಲ್ಲಿದ್ದು, ವಿರೋಧಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿದ್ದಾರೆ.
ಸಲ್ಮಾನ್ ಖಾನ್ ವಿರುದ್ಧ ದ್ವೇಷವೇಕೆ?: ಸದ್ಯ ಈ ಗ್ಯಾಂಗ್ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದೆ. ಯಾವಾಗ ಬೇಕಾದರೂ ಸಲ್ಮಾನ್ರನ್ನು ಶೂಟೌಟ್ ಮಾಡಬಲ್ಲೆವು ಎಂದು ಎಚ್ಚರಿಕೆ ನೀಡಿದೆ. 2024ರ ಏಪ್ರಿಲ್ನಲ್ಲಿ, ಮುಂಬೈನಲ್ಲಿರುವ ಸಲ್ಮಾನ್ರ ಬಾಂದ್ರಾ ನಿವಾಸದ ಹೊರಗೆ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಶೂಟರ್ಗಳು ಗುಂಡಿನ ದಾಳಿ ನಡೆಸಿದ್ದು, ಸಲ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದರು. 1998ರಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದಕ್ಕಾಗಿ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ರನ್ನು ಹತ್ಯೆ ಮಾಡುವುದಾಗಿ ಹೇಳಿದೆ. ಬಿಷ್ಣೋಯ್ ಸಮುದಾಯ ಕೃಷ್ಣಮೃಗವನ್ನು ಅತಿ ಪವಿತ್ರ ಎಂದು ಪರಿಗಣಿಸುವುದರಿಂದ ಸಲ್ಮಾನ್ ಮೇಲೆ ಅವರಿಗೆ ಭಾರೀ ಆಕ್ರೋಶವಿದೆ. ಜೈಲಿನಲ್ಲಿದ್ದುಕೊಂಡೆ ಹಿಂದೊಮ್ಮೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ರಾಜಸ್ಥಾನದ ಬಿಕಾನೇರ್ನಲ್ಲಿರುವ ಬಿಷ್ಣೋಯ್ ಸಮಾಜದ ಮುಕಾಂ ಮುಕ್ತಿಧಾಮ ದೇಗುಲಕ್ಕೇ ಭೇಟಿ ನೀಡಿ, ಅಲ್ಲಿ ತನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಬೇಕು. ಆಗ ಮಾತ್ರ ನಾವು ಅವರನ್ನು ಕ್ಷಮಿಸಲು ಸಾಧ್ಯ ಎಂದಿದ್ದ. ಈಗ ಸಿದ್ದಿಕಿ ಹತ್ಯೆ ಬಳಿಕ ಬಿಷ್ಣೋಯ್ ಸಭಾ ಕೂಡ ಸಲ್ಮಾನ್ ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕು ಎಂದು ಮತ್ತೊಮ್ಮೆ ಪ್ರಸ್ತಾಪಿಸಿದೆ. ಬಿಷ್ಣೋಯ್ ಸಭಾ ಕಾರ್ಯದರ್ಶಿ ಇಂದ್ರಜೀತ್ ಬಿಷ್ಣೋಯ್, ‘ಕ್ಷಮೆ ಕೇಳಲು ದೇಗುಲದಲ್ಲಿ ಸಲ್ಮಾನ್ಗೆ ಗೌರವಾನ್ವಿತವಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು’ ಎಂಬ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಸಲ್ಮಾನ್ ಅಭಿಮಾನಿಗಳ ಮಧ್ಯೆ, ಕ್ಷಮೆ ಕೇಳಬೇಕೆ/ಬೇಡವೇ ಎಂಬ ಚರ್ಚೆಗಳೂ ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿವೆ.
ನಿಜ್ಜರ್ ಹತ್ಯೆ, ಬಿಷ್ಣೋಯ್ ಮೇಲೆ ಕಣ್ಣು: ಅಕ್ಟೋಬರ್ 12ರಂದು ಭಾರತದ ಭದ್ರತಾ ಸಲಹೆಗಾರ ಮತ್ತು ಕೆನಡಾದ ಭದ್ರತಾ ಮುಖ್ಯಸ್ಥರ ಮಧ್ಯೆ ಸಿಂಗಾಪುರದಲ್ಲಿ 5 ಗಂಟೆಗಳ ರಹಸ್ಯ ಸಭೆ ನಡೆದಿದೆ ಎನ್ನಲಾಗಿದ್ದು, ಖಲಿಸ್ತಾನಿ ಉಗ್ರವಾದಿ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಬಿಷ್ಣೋಯ್ ಗ್ಯಾಂಗ್ನವರೇ ಕೊಂದಿದ್ದಾರೆ ಎಂದು ಕೆನಡಾ ನೇರ ಆರೋಪ ಮಾಡಿದೆ. 2023ರ ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದ ಹೊರಗೆ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಮೂವರು ಶಾರ್ಪ್ ಶೂಟರ್ಗಳು ಆತನ ಮೇಲೆ 34 ಸುತ್ತುಗಳ ಗುಂಡು ಹಾರಿಸಿದ್ದರು. ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಿಜ್ಜರ್ನನ್ನು ಭಯೋತ್ಪಾದಕ ಎಂದು ಗುರುತಿಸಿ, ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೊಷಿಸಿತ್ತು ಎನ್ನುವುದು ಉಲ್ಲೇಖಾರ್ಹ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಹಯೋಗದೊಂದಿಗೆ ಪಂಜಾಬ್ನಲ್ಲಿ ಹಿಂದು ನಾಯಕರ ಹತ್ಯೆಗಳನ್ನು ನಡೆಸಿದ ಆರೋಪ ನಿಜ್ಜರ್ ಮೇಲಿದೆ. ಮೇಲಾಗಿ, ಪಂಜಾಬ್ನಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆತ, ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಎಂದೂ ಗುಪ್ತಚರ ಸಂಸ್ಥೆಗಳು ಹಿಂದೆ ಹೇಳಿದ್ದವು. 2018ರಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪಂಜಾಬ್ಗೆ ಭೇಟಿ ನೀಡಿದ್ದಾಗ. ಕೆನಡಾದಲ್ಲಿರುವ ನಿಜ್ಜರ್ ಸೇರಿ 8 ಮಂದಿ ಪ್ರತ್ಯೇಕತಾವಾದಿ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಂದಿನ ಪಂಜಾಬ್ ಸಿಎಂ ಒತ್ತಾಯಿಸಿದ್ದರು. ಖಲಿಸ್ತಾನಿ ಉಗ್ರವಾದ ಉತ್ತೇಜಿಸುವ ನಿಜ್ಜರ್ ವಿರುದ್ಧ ಪಂಜಾಬ್ ಸರ್ಕಾರ ಕೂಡ ಕಠಿಣ ಧೋರಣೆ ತಾಳಿತ್ತು/ತಾಳಿದೆ ಎನ್ನುವುದೂ ಗಮನಾರ್ಹ. ಏತನ್ಮಧ್ಯೆ, ನಿಜ್ಜರ್ ಹತ್ಯೆಯಾದ ಒಂದು ವರ್ಷದ ನಂತರ, ಅಂದರೆ 2024ರ ಮೇ ತಿಂಗಳಲ್ಲಿ ಕೆನಡಾ ಪೊಲೀಸರು ಭಾರತೀಯ ಮೂಲದ ನಾಲ್ವರನ್ನು ಬಂಧಿಸಿದರು. ಬಂಧಿತರಲ್ಲಿ ಮೂವರಾದ ಕರಣ್ ಬ್ರಾರ್, ಕಮಲ್ ಪ್ರೀತ್ ಸಿಂಗ್, ಕರಣ್ ಪ್ರೀತ್ ಸಿಂಗ್ ನಿಜ್ಜರ್ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಕೆನಡಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ನಾಲ್ಕನೇ ಶಂಕಿತ 22 ವರ್ಷದ ಅಮರ್ದೀಪ್ ಸಿಂಗ್ ಕೂಡ ಕೊಲೆಯಲ್ಲಿ ಭಾಗಿ ಎಂದು ಹೇಳಿಕೊಂಡಿದ್ದಾನೆ. ಇವರೆಲ್ಲರೂ ‘ಬಿಷ್ಣೋಯ್ ಗ್ಯಾಂಗಿನವರು’ ಎನ್ನುವುದು ಅಲ್ಲಿನ ಪೊಲೀಸರ ವಾದ.
ಹತ್ಯೆ ಆರೋಪಿಗಳ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ನೀಡುವ ಮುನ್ನವೇ ಅಲ್ಲಿನ ಮಾಧ್ಯಮವೊಂದು, ‘ನಾಲ್ವರು ಬಂಧಿತರು ಬಿಷ್ಣೋಯ್ ಗ್ಯಾಂಗಿನವರು’ ಎಂದು ವರದಿ ಮಾಡಿತ್ತು. ಭಾರತ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ಈ ನಾಲ್ವರನ್ನು ಪಂಜಾಬ್ನಿಂದ ಕೆನಡಾಕ್ಕೆ ಕಳುಹಿಸಿಕೊಟ್ಟು, ನಿಜ್ಜರ್ನನ್ನು ಕೊಲೆ ಮಾಡಲು ಸೂಚಿಸಿತ್ತು ಎಂದು ಮಾಧ್ಯಮ ವರದಿ ಹೇಳುತ್ತದೆ. ಅ. 15ರಂದು ಈ ಸಂಬಂಧ ಭಾರತದ ವಿರುದ್ಧ ಹೇಳಿಕೆ ಯೊಂದನ್ನು ಪ್ರಕಟಿಸಿ, ಕೆನಡಾದಲ್ಲಿ ಭಾರತದ ಏಜೆಂಟ್ಗಳು ಖಲಿಸ್ತಾನಿ ವಾದಿಗಳ ವಿರುದ್ಧ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಪುನರುಚ್ಚರಿಸಿತು. ಅದೇನೇ ಇರಲಿ, ಬಂಧಿತ ನಾಲ್ವರನ್ನು ಹೊರತುಪಡಿಸಿ, ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎನ್ನುವುದಕ್ಕೆ ಕೆನಡಾ ಗಟ್ಟಿ, ದೃಢವಾದ ಸಾಕ್ಷ್ಯವನ್ನು ಇನ್ನೂ ಪ್ರಸ್ತುತಪಡಿಸಿಲ್ಲ.
ಹಲವು ಪ್ರಕರಣಗಳು: ಕೆನಡಾದ ವಿನ್ನಿಪೆಗ್ನಲ್ಲಿ 2023ರ ಸೆಪ್ಟೆಂಬರ್ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆ ಹಿಂದೆಯೂ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ. ಸುಖ್ದೂಲ್ ಸಿಂಗ್ ಭಾರತದಿಂದ ಪಲಾಯನಗೈದು, ಕೆನಡಾದಲ್ಲಿ ನೆಲೆಸಿದ್ದ. ಆತ ಬಿಷ್ಣೋಯ್ ಗ್ಯಾಂಗ್ನ ಎದುರಾಳಿ ಬಂಬೀಹಾ ಗ್ಯಾಂಗ್ನೊಂದಿಗೆ ನಂಟು ಹೊಂದಿದ್ದ. ‘ಈತನನ್ನೂ ನಾವೇ ಕೊಂದಿದ್ದು’ ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿತು. ‘ನಮ್ಮ ಶತ್ರುಗಳು ಎಲ್ಲೇ ಇದ್ದರೂ ಬಿಡುವುದಿಲ್ಲ’ ಎಂದು ಗ್ಯಾಂಗ್ ಹೇಳಿಕೆ ನೀಡಿತ್ತು. ಏನೇ ಇರಲಿ, ಕೆನಡಾದಲ್ಲಿ ನಿಜ್ಜರ್ ಹತ್ಯೆಗೆ ಬಿಷ್ಣೋಯ್ನನ್ನು ಭಾರತ ಸರ್ಕಾರ ಬಳಸಿಕೊಂಡಿದೆಯೇ? ನಿಜವಾಗಿಯೂ ಬಿಷ್ಣೋಯ್ ಗ್ಯಾಂಗ್ನವರೇ ಈ ಕೊಲೆ ಮಾಡಿದ್ದಾ? ಅಥವಾ ಇದು ಗ್ಯಾಂಗ್ವಾರ್ ಆಗಿರಬಹುದೇ? ಗ್ಯಾಂಗ್ವಾರ್ ಬದಲು ಈ ಹತ್ಯೆಯೊಂದಿಗೆ ಭಾರತ ಸರ್ಕಾರವನ್ನು ಜೋಡಿಸುವುದು ಕೆನಡಾ ಸರ್ಕಾರದ ಉದ್ದೇಶವೇ? ಈ ಮೂಲಕ ಖಲಿಸ್ತಾನಿಗಳ ಅನುಕಂಪ ಗಿಟ್ಟಿಸುವ ಲೆಕ್ಕಾಚಾರವಿರಬಹುದೇ ಎಂಬೆಲ್ಲ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಉತ್ತರ ಸಿಗುವ ಮುನ್ನವೇ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ತಲುಪಿದೆ. ಎರಡೂ ದೇಶಗಳಲ್ಲಿರುವ ರಾಜತಾಂತ್ರಿಕರು ತಮ್ಮ ದೇಶಗಳಿಗೆ ವಾಪಸಾಗುತ್ತಿದ್ದಾರೆ. ಉಭಯ ದೇಶಗಳ ಉನ್ನತ ಆಡಳಿತ ನೀಡುತ್ತಿರುವ ಹೇಳಿಕೆಗಳು ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸುಳಿವು ನೀಡುತ್ತಿದೆ. ಕೆನಡಾಕ್ಕೆ ಹೋಗಿ ಶಿಕ್ಷಣ ಪಡೆಯುತ್ತಿರುವ, ಉದ್ಯೋಗದಲ್ಲಿರುವ ಭಾರತೀಯರು ಗೊಂದಲಕ್ಕೀಡಾಗಿದ್ದಾರೆ.
ಭಾರತದ ನಿಲುವು: ಖಲಿಸ್ತಾನಿ ಉಗ್ರರಿಗೆ, ದರೋಡೆಕೋರರು, ಸುಲಿಗೆಕೋರರಿಗೆ ಕೆನಡಾ ಸುರಕ್ಷಿತ ಸ್ವರ್ಗವಾಗಿದೆ ಎಂದು ಭಾರತ ಆರೋಪಿಸುತ್ತಲೇ ಬಂದಿದೆ. ಕಳೆದ ಮೇ ತಿಂಗಳಲ್ಲಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ನಿಜ್ಜರ್ ಹತ್ಯೆಯ ಆರೋಪಿಗಳ ಬಂಧನಕ್ಕೆ ಪ್ರತಿಕ್ರಿಯಿಸಿ, ‘ಅಲ್ಲಿ ಯಾರನ್ನೇ ಬಂಧಿಸಿರಬಹುದು. ಪೊಲೀಸರು ತನಿಖೆಯನ್ನೂ ಮಾಡಿರಬಹುದು. ಆದರೆ, ಪಂಜಾಬ್ನಲ್ಲಿ ಸಂಘಟಿತ ಅಪರಾಧಗಳೊಂದಿಗೆ ಸಂಪರ್ಕ ಹೊಂದಿರುವ ಹಲವು ಗ್ಯಾಂಗ್ನವರು ಕೆನಡಾದಲ್ಲಿದ್ದಾರೆ ಮತ್ತು ಅವರನ್ನು ಅಷ್ಟೇ ಖುಷಿಯಿಂದ ಸ್ವಾಗತಿಸುವವರಿದ್ದಾರೆ. ನೋಡಿ, ಇವರು ಭಾರತಕ್ಕೆ ಬೇಕಾಗಿರುವ ಅಪರಾಧಿಗಳು. ನೀವು ಅವರಿಗೆ ವೀಸಾ ನೀಡಿದ್ದೀರಿ. ಅವರಿಗೆ ಬರಲು ಅವಕಾಶ ನೀಡಿದ್ದೀರಿ. ಅವರಲ್ಲಿ ಹಲವರು ಸುಳ್ಳು ದಾಖಲೆಗಳನ್ನು ಹೊಂದಿದ್ದಾರೆ. ಹೀಗಿದ್ದರೂ ನೀವು ಅವರಿಗೆ ಅಲ್ಲಿ ನೆಲೆಸಲು ಅವಕಾಶ ನೀಡುತ್ತಿದ್ದೀರಿ ಎಂದು ನಾವು ಕೆನಡಾಕ್ಕೆ ಹೇಳುತ್ತಲೇ ಇದ್ದೇವೆ’ ಎಂದು ವಿವರಿಸಿದ್ದರು. ಆದರೆ, ದೊಡ್ಡ ಪ್ರಮಾಣದ ಮತಬ್ಯಾಂಕ್ ಆಗಿರುವ ಸಿಖ್ ಸಮುದಾಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಕೆನಡಾ ಸರ್ಕಾರ ಭಾರತದ ಬೇಡಿಕೆಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ವಾಸ್ತವ.
‘ನೀವು ರಾಜಕೀಯ ಉದ್ದೇಶಗಳಿಗಾಗಿ ಸಂಶಯಾಸ್ಪದ, ನಕಾರಾತ್ಮಕ ಹಿನ್ನೆಲೆ ಹೊಂದಿರುವ ಜನರನ್ನು ದೇಶಕ್ಕೆ ಬರುವಂತೆ ಮಾಡುತ್ತಿದ್ದೀರಿ. ಇದು ಸಮಸ್ಯೆಗಳಿಗೆ ಕಾರಣವಾಗಲಿದೆ’ ಎಂದು ಜೈಶಂಕರ್ ಅಂದೇ ಎಚ್ಚರಿಸಿದ್ದರು. 2022ರಲ್ಲಿ ಸಿಧು ಮೂಸೆವಾಲಾ ಹತ್ಯೆ ನಂತರ ಕೆನಡಾ ಅಧಿಕಾರಿಗಳೊಂದಿಗೆ ಕಳವಳ ಹಂಚಿಕೊಂಡಿದ್ದ ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್, ಪಂಜಾಬ್ನಲ್ಲಿ ಹಿಂಸಾತ್ಮಕ ಅಪರಾಧಗಳಲ್ಲಿ ಕೆನಡಾದಿಂದ ಆಪರೇಟ್ ಮಾಡುತ್ತಿರುವ ಗ್ಯಾಂಗ್ಗಳ ಕೈವಾಡದ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಬಿಷ್ಣೋಯ್ ಗ್ಯಾಂಗ್ ಕೆನಡಾದಲ್ಲಿ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಶಂಕೆಯಿದೆ. ಸೆಪ್ಟೆಂಬರ್ನಲ್ಲಿ ಕೆನಡಾದಲ್ಲಿ ರಾಪರ್ ಎಪಿ ಧಿಲ್ಲೋನ್ ಅವರ ಮನೆಯ ಹೊರಗೆ ಗುಂಡಿನ ದಾಳಿ, ಕಳೆದ ನವೆಂಬರ್ನಲ್ಲಿ ಕೆನಡಾದಲ್ಲಿ ಪಂಜಾಬಿ ಗಾಯಕ ಮತ್ತು ನಟ ಗಿಪ್ಪಿ ಗ್ರೆವಾಲ್ ನಿವಾಸದ ಹೊರಗೆ ಗುಂಡಿನ ದಾಳಿ, ಬಂಬೀಹಾ ಗ್ಯಾಂಗ್ನ ಸುಖ್ದೂಲ್ ಸಿಂಗ್ ಕೊಲೆ... ಹೀಗೆ ಬಿಷ್ಣೋಯ್ ಗ್ಯಾಂಗ್ ಒಂದಿಲ್ಲೊಂದು ದಾಳಿ ಮೂಲಕ ಕೆನಡಾದಲ್ಲಿ ಗದ್ದಲ ಎಬ್ಬಿಸುತ್ತಲೇ ಇದೆ.