ನ್ಯೂಸ್

ರಾತ್ರಿ ಕರ್ಫ್ಯೂಗೆ ಆಕ್ಷೇಪ : ಇಂದಿನಿಂದ ಜ.5ರವರೆಗೆ ನಿರ್ಬಂಧ - ರಾಜ್ಯಾದ್ಯಂತ ತೀವ್ರ ವಿರೋಧ

shastrimath

ಬೆಂಗಳೂರು : ಬ್ರಿಟನ್​ನಲ್ಲಿ ಪತ್ತೆಯಾದ ರೂಪಾಂತರಿ ಕರೊನಾ ವೈರಸ್ ಹಾವಳಿ ತಡೆಯುವ ಮುಂಜಾಗ್ರತಾ ಕ್ರಮವಾಗಿ ಗುರುವಾರದಿಂದ ಜಾರಿಗೆ ಬರುವಂತೆ ಜ.2ರವರೆಗೆ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಪ್ರತಿದಿನ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಅನ್ವಯವಾಗುವ ಈ ನಿರ್ಬಂಧಕ್ಕೆ ಜನಸಾಮಾನ್ಯರಿಂದ ಹಿಡಿದು ಹೋಟೆಲ್, ಬಾರ್, ಪಬ್ ಮಾಲೀಕರು, ಓಲಾ, ಉಬರ್​ನಂತಹ ಸಾರಿಗೆ ಸಂಸ್ಥೆಗಳು ಹಾಗೂ ವಿವಿಧ ಉದ್ಯಮಗಳಿಂದ ಆಕ್ಷೇಪ, ಆಕ್ರೋಶ ವ್ಯಕ್ತವಾಗಿದೆ.

ಡಿ.24ರ ರಾತ್ರಿ ಕ್ರಿಸ್​ವುಸ್ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ವಿುಕ ಕಾರ್ಯಕ್ರಮ (ಮಿಡ್​ನೈಟ್)ಗಳಿಗೆ ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳಿಕ ಮಾತನಾಡಿದ್ದ ಸಿಎಂ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಬುಧವಾರದಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಿಸಿದ್ದರು. ಆದರೆ ವಾಣಿಜ್ಯೋದ್ಯಮಿಗಳು, ವಿವಿಧ ವಲಯಗಳ ಜನರ ತೀವ್ರ ಒತ್ತಡ ಹಾಗೂ ಮನವಿಗೆ ಓಗೊಟ್ಟ ಬಿಎಸ್​ವೈ, ರಾತ್ರಿ ಕರ್ಫ್ಯೂವನ್ನು ಒಂದು ದಿನದಮಟ್ಟಿಗೆ ಮುಂದೂಡಿ, ವೇಳೆಯಲ್ಲೂ ಬದಲಾವಣೆ ಮಾಡಿದರು.

ಜನರ ಹಿತದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ಸಹಕರಿಸಬೇಕು. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಈ ಮೊದಲೇ ಲಾಕ್​ಡೌನ್, ರಾತ್ರಿ ಕರ್ಫ್ಯೂ ಜಾರಿಗೊಳಿಸಿದಾಗ ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಈಗ ಕ್ರಿಸ್​ವುಸ್ ಮತ್ತು ಹೊಸ ವರ್ಷಾಚರಣೆ ವೇಳೆ ಸಂಜೆ 6 ಗಂಟೆ ನಂತರವೇ ಬಿಜಿನೆಸ್ ಹೆಚ್ಚಳವಾಗುತ್ತದೆ. ಹೀಗಾಗಿ, ರಾತ್ರಿ ಕರ್ಫ್ಯೂ ಬಿಟ್ಟು, ಅನ್ಯಮಾರ್ಗ ಹುಡುಕಬೇಕು. | ತನ್ವೀರ್, ಓಲಾ-ಉಬರ್ ಚಾಲಕರ ಸಂಘದ ಅಧ್ಯಕ್ಷ ಲಾಕ್​ಡೌನ್ ವೇಳೆ ಹೋಟೆಲ್, ರೆಸ್ಟೋರೆಂಟ್, ಪಬ್, ಬಾರ್​ಗಳ ಮಾಲೀಕರಿಗೆ ಹೆಚ್ಚು ಆರ್ಥಿಕ ನಷ್ಟ ಉಂಟಾಗಿದ್ದು, ಈಗಲೂ ಚೇತರಿಕೆ ಆಗಿಲ್ಲ. ಇದೀಗ ಮತ್ತೆ ರಾತ್ರಿ ಕರ್ಫ್ಯೂ ಜಾರಿ ಮಾಡಿದಲ್ಲಿ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಬಾರ್, ರೆಸ್ಟೋರೆಂಟ್, ಪಬ್​ಗಳಿಗೆ ಅಧಿಕ ಹಾನಿಯಾಗಲಿದೆ. | ಚಂದ್ರಶೇಖರ್ ಹೆಬ್ಬಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

ಆಸ್ಪತ್ರೆ, ಔಷಧ ಅಂಗಡಿಯಂತಹ ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಚಟುವಟಿಕೆಗಳನ್ನು ರಾತ್ರಿ 11ರ ಬಳಿಕ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರಾತ್ರಿ 11 ರಿಂದ 5ರವರೆಗೆ ಕರ್ಫ್ಯೂ ಗುರುವಾರದಿಂದ ಜಾರಿಗೆ ಬರಲಿದ್ದು, ಜ.2ರ ಬೆಳಗ್ಗೆ 5ರವರೆಗೆ ಅನ್ವಯವಾಗಲಿದೆ. ಕೇಂದ್ರ ಸರ್ಕಾರದ ಸಲಹೆ ಹಾಗೂ ತಜ್ಞರ ಅಭಿಪ್ರಾಯದಂತೆ ರೂಪಾಂತರಿ ಕರೊನಾ ವೈರಾಣು ಸೋಂಕು ನಿಯಂತ್ರಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಬಿಎಸ್​ವೈ ಸಮರ್ಥಿಸಿಕೊಂಡರು.

ನೆಗೆಟಿವ್ ವರದಿ ಕಡ್ಡಾಯ: ಹೊರ ದೇಶಗಳಿಂದ ಬರುವವರು 72 ತಾಸುಗಳ ಮುಂಚೆ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿ, ಕರೊನಾ ನೆಗೆಟಿವ್ ವರದಿ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ಸೇರಿದಂತೆ ಅಗತ್ಯ ನಿಗಾ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಸ್​ವೈ ವಿವರಿಸಿದರು. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಉದ್ಯಮಗಳ ವಿರೋಧ : ರಾತ್ರಿ ಕರ್ಫ್ಯೂ ಮರುಜಾರಿಗೆ ವ್ಯಾಪಾರೋದ್ಯಮ, ಮಾರುಕಟ್ಟೆ, ಹೋಟೆಲ್, ಬಾರ್, ಪಬ್ ಮಾಲೀಕರು, ಓಲಾ, ಉಬರ್, ಆಟೋ ಚಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಗಲು ವೇಳೆ ಜನರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು, ಸೋಂಕು ಹರಡಲು ಮುಕ್ತದಾರಿ ಕಲ್ಪಿಸಿಕೊಟ್ಟಿರುವ ಸರ್ಕಾರ ಹೆಚ್ಚು ಚಟುವಟಿಕೆ ನಡೆಯದ ರಾತ್ರಿ ವೇಳೆ ಕರ್ಫ್ಯೂ ಜಾರಿಗೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ವಿರೋಧಕ್ಕೆ ಕಾರಣ? *ರಾತ್ರಿ ಕರ್ಫ್ಯೂವಿನಿಂದ ಜನಸಾಮಾನ್ಯರಿಗೆ ತೊಂದರೆ *ಹೋಟೆಲ್, ಪಬ್, ಸಾರಿಗೆ ಉದ್ಯಮಗಳಿಗೆ ಸಂಕಷ್ಟ *ಅವುಗಳನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ವಿುಕರಿಗೆ ಹೊಡೆತ ಮಾರ್ಗಸೂಚಿ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಇಂತಿದೆ. ಯಾವುದು ನಿರ್ಬಂಧ *ಅಗತ್ಯ ಕೆಲಸ ಹೊರತುಪಡಿಸಿ ಜನರ ಓಡಾಟ ಯಾವುದಕ್ಕೆ ಅವಕಾಶ *ಸರಕು ಸಾಗಣೆ ವಾಹನಗಳ ಸಂಚಾರ ಮುಕ್ತ * ಎಲ್ಲ ಉದ್ಯಮ, ಕಂಪನಿ ಹಾಗೂ ಸಂಸ್ಥೆಗಳ ಒಟ್ಟಾರೆ ಬಲದಲ್ಲಿ ಅರ್ಧದಷ್ಟು ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಓಡಾಟ *ದಿನದ 24 ತಾಸು ಕೆಲಸ ಮಾಡಬೇಕಾದ ಅಗತ್ಯವುಳ್ಳ ಕೈಗಾರಿಕೆ/ಕಾರ್ಖಾನೆಗಳು *ದೂರ ಅಂತರದ ಊರುಗಳ ಬಸ್, ರೈಲು ಮತ್ತು ವಿಮಾನಗಳ ರಾತ್ರಿ ಸಂಚಾರ

ಇರುವ ನಿಯಮ ಸಾಕಿತ್ತು: ಕ್ರಿಸ್​ವುಸ್, ಹೊಸ ವರ್ಷಾಚರಣೆ ವೇಳೆ ಒಮ್ಮೆಲೆ 100ಕ್ಕೂ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಜತೆಗೆ, ಬೆಂಗಳೂರಿನ ಎಂ.ಜಿ. ರಸ್ತೆ, ಕೋರಮಂಗಲ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್​ಗಳಲ್ಲಿ ಹೊಸ ವರ್ಷಾಚರಣೆ ಮಾಡುವುದಕ್ಕೆ ತಡೆ ಒಡ್ಡಲಾಗಿದೆ. ಈ ನಿಯಮವನ್ನೇ ಇನ್ನಷ್ಟು ಬಿಗಿ ಮಾಡಿದ್ದರೆ ಸಾಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕರ್ಫ್ಯೂ ವಾಪಸ್​ಗೆ ಮನವಿ: ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಹೋಟೆಲ್, ರೆಸ್ಟೋರೆಂಟ್, ಪಬ್, ಬಾರ್​ಗಳು, ಪಾರ್ಟಿ ಹಾಲ್​ಗಳು, ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿನ ಉದ್ಯಮಗಳಿಗೆ ಹೆಚ್ಚು ವ್ಯಾಪಾರ ಆಗುತ್ತದೆ. ಆದರೆ ರಾತ್ರಿ ಕರ್ಫ್ಯೂ ಮರು ಜಾರಿಯಿಂದಾಗಿ ಆ ವ್ಯಾಪಾರಕ್ಕೂ ಕಲ್ಲು ಬಿದ್ದಂತಾಗಿದೆ. ನಿಷೇಧಾಜ್ಞೆ ಭಯದಿಂದ ಜನರು ಮನೆಯಿಂದಲೇ ಹೊರಬರದಿದ್ದರೆ ಉದ್ಯಮಕ್ಕೆ ನಷ್ಟವಾಗಲಿದೆ. ಹೀಗಾಗಿ, ನಿಷೇಧ ವಾಪಸ್ ಪಡೆಯುವಂತೆ ಉದ್ಯಮ ವಲಯದವರು ಆಗ್ರಹಿಸಿದ್ದಾರೆ.

ಕೋಟಿ ಕೋಟಿ ನಷ್ಟ : 10 ದಿನ ರಾತ್ರಿ ಕರ್ಫ್ಯೂ ಇದ್ದಲ್ಲಿ ಕೋಟ್ಯಂತರ ರೂ.ನಷ್ಟ ಉಂಟಾಗಲಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಮಧ್ಯಮ ವರ್ಗದ ಉದ್ಯಮ ಹಾಗೂ ಕೆಳವರ್ಗದ ಜನರ ಮೇಲೆ ಇದರ ಪರಿಣಾಮ ಹೆಚ್ಚು ಎಂಬ ಅಭಿಪ್ರಾಯವೂ ಇದೆ.

ರಾತ್ರಿ ಪಾಳಿಗೆ ತೊಂದರೆ : ಕರೊನಾದಿಂದ ಕಂಗಾಲಾಗಿದ್ದ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಈಗ ಚೇತರಿಕೆ ಕಾಣಿಸಿಕೊಂಡಿದ್ದು, ಆರ್ಡರ್​ಗಳನ್ನು ಪಡೆದುಕೊಂಡು, 3 ಪಾಳಿಯಲ್ಲಿ ಶೇ.60 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ರಾತ್ರಿ ಕರ್ಫ್ಯೂ ಜಾರಿಗೊಳಿಸಿದರೆ 2ನೇ ಪಾಳಿ ಕೆಲಸ ಮುಗಿಸಿ ಮನೆಗೆ ಹೋಗುವ ಮತ್ತು ರಾತ್ರಿಪಾಳಿ ಕೆಲಸಕ್ಕೆ ಬರುವ ಕಾರ್ವಿುಕರಿಗೆ ತೊಂದರೆ ಆಗುತ್ತದೆ. ಕಾರ್ಖಾನೆ ಕಾರ್ವಿುಕರಿಗೆ ಪೊಲೀಸರಿಂದ ತೊಂದರೆ ಆಗದಂತೆ ಕ್ರಮವಹಿಸಿದಲ್ಲಿ ಅನುಕೂಲವಾಗಲಿದೆ ಎಂದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾರಿಗೆ ಉಪಯೋಗ? : ಜನರು ಮಲಗಿದ ನಂತರ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದಲ್ಲಿ ಯಾರಿಗೆ ಉಪಯೋಗವಾಗಲಿದೆ? ಎಲ್ಲ ವಾಹನ ಸಂಚಾರ, ಧಾರ್ವಿುಕ ಕಾರ್ಯಕ್ರಮ ಆಚರಣೆ, ವ್ಯಾಪಾರೋದ್ಯಮ, ಕೈಗಾರಿಕೆಗಳನ್ನು ಶೇ.50 ಸಿಬ್ಬಂದಿಯಿಂದ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಎಲ್ಲ ಕಾರ್ಯಗಳಿಗೂ ಮುಕ್ತ ಅವಕಾಶ ನೀಡಿದರೆ, ನಿಷೇಧಾಜ್ಞೆಗೆ ಅರ್ಥವೇ ಇಲ್ಲದಂತಾಗುತ್ತದೆ. ರಾತ್ರಿ ನಿಷೇಧಾಜ್ಞೆಯಿಂದ ಯಾವ ರೀತಿ ಸೋಂಕು ಹರಡುವುದನ್ನು ತಡೆಗಟ್ಟಲು ಮುಂದಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..